ಉದಯವಾಹಿನಿ, ಲಕ್ನೋ: ʻಇದ್ದಕ್ಕಿದ್ದಂತೆ ಬಿಲ್ಡಿಂಗ್‌ವೊಂದರಿಂದ ಮಹಿಳೆಯ ಚೀರಾಟ ಕೇಳಿಬಂತು, ಕುತೂಹಲದಿಂದ ನೆರೆಯವರೆಲ್ಲ ಕಿಟಕಿ, ಬಾಲ್ಕನಿಯಲ್ಲಿ ನಿಂತು ಇಣುಕಿದ್ರು. ಕೆಲ ಸೆಕೆಂಡುಗಳಲ್ಲಿ ತಾಯಿ ಮಗು ಇಬ್ಬರ ದೇಹ ನೆಲ್ಲಕ್ಕೆ ರಪ್ಪನೆ ಅಪ್ಪಳಿಸಿತು, ರಸ್ತೆಗೆಲ್ಲ ರಕ್ತ ಚಿಮ್ಮಿತು. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ತಾಯಿ, ಮಗುವಿನ ಪ್ರಾಣ ಪಕ್ಷಿ ಹಾರಿತು. ಇದೀಗ ಈ ಘಟನೆ ಅಲ್ಲಿನ ಸ್ಥಳೀಯರನ್ನೂ ಬೆಚ್ಚಿಬೀಳುವಂತೆ ಮಾಡಿದೆ. ಹೃದಯ ಕಲಕುವ ಈ ಘಟನೆ ನಡೆದಿದ್ದು, ಗ್ರೇಟರ್ ನೋಯ್ಡಾದಲ್ಲಿ ಹೌದು. ಮಗನ ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ಮಹಿಳೆ ಸಾಕ್ಷಿ ಚಾವ್ಲಾ (37) ತನ್ನ 11 ವರ್ಷ ಮಗನೊಂದಿಗೆ (ಮಗ ದಕ್ಷ) 13ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸೋದಕ್ಕೂ ಮುನ್ನವೇ ಮನೆಯನ್ನ ಶೋಧಿಸಿದ್ದಾರೆ. ಈವೇಳೆ ಮೃತ ಮಹಿಳೆ ಸಾಕ್ಷಿ ಪತಿಗೆ ಬರೆದಿದ್ದ ಡೆತ್‌ನೋಟ್ ಪತ್ತೆಯಾಗಿದೆ. ಇದರಲ್ಲಿ ʻನಾವು ಈ ಲೋಕವನ್ನು ತೊರೆಯುತ್ತಿದ್ದೇವೆ.. ಕ್ಷಮಿಸಿ… ನಾವು ಇನ್ಮುಂದೆ ನಿಮಗೆ ತೊಂದರೆ ಕೊಡಲು ಬಯಸುವುದಿಲ್ಲ. ನಮ್ಮಿಂದಾಗಿ ನಿಮ್ಮ ಜೀವನ ಹಾಳಾಗಬಾರದು. ನಮ್ಮ ಸಾವಿಗೆ ಯಾರೂ ಕಾರಣವಲ್ಲʼ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
