ಉದಯವಾಹಿನಿ, ದಿಸ್ಪುರ್: ನಾನು ಶಿವನ ಭಕ್ತ, ಎಲ್ಲಾ ವಿಷವನ್ನು ನಾನು ನುಂಗುತ್ತೇನೆ, ಆದ್ರೆ ಬೇರೆಯವರಿಗೆ ಅವಮಾನವಾದ್ರೆ ಸಹಿಸಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದರು. ಅಸ್ಸಾಂನ ದರಂಗ್‌ನಲ್ಲಿ ಅಭಿವೃದ್ಧಿಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಶಿವನ ಭಕ್ತ, ಎಲ್ಲಾ ವಿಷವನ್ನು ನಾನು ನುಂಗುತ್ತೇನೆ. ನನಗೆ ಎಷ್ಟೇ ನಿಂದನೆ ಮಾಡಿದರೂ ತಡೆಯುತ್ತೇನೆ. ಆದ್ರೆ ಬೇರೆಯವರಿಗೆ ಅವಮಾನವಾದ್ರೆ, ನಾನು ಮೌನವಾಗಿರಲು ಸಾಧ್ಯವಿಲ್ಲ ಎಂದು ವಿಪಕ್ಷಗಳ ವಿರುದ್ಧ ಅಬ್ಬರಿಸಿ ಬೊಬ್ಬರಿದರು.
ಕಾಂಗ್ರೆಸ್ ವಿರುದ್ಧವೂ ಗುಡುಗಿದ ಮೋದಿ, ಪಾಕಿಸ್ತಾನದಿಂದ ಪೋಷಿಸಲ್ಪಟ್ಟ ಭಯೋತ್ಪಾದಕರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದೇ ವೇಳೆ 1962ರ ಭಾರತ-ಚೀನಾ ಯುದ್ಧವನ್ನು ಉಲ್ಲೇಖಿಸಿ ನೆಹರೂ ವಿರುದ್ಧವೂ ಮಾತನಾಡಿದರು. ಚೀನಾ ಯುದ್ಧದ ಬಳಿಕ ದೇಶದ ಮೊದಲ ಪ್ರಧಾನಿ ಈಶಾನ್ಯ ಜನರಿಗೆ ಮಾಡಿದ ಗಾಯಗಳು ಇನ್ನೂ ವಾಸಿಯಾಗಿಲ್ಲ ಎಂದು ದೂರಿದರು.
ಇನ್ನೂ ಆಪರೇಷನ್ ಸಿಂಧೂರ ಯಶಸ್ಸನ್ನು ಸ್ಮರಿಸಿದ ಮೋದಿ, ಅಮ್ಮ ಕಾಮಾಕ್ಯಳಿಂದ ಆಪರೇಷನ್ ಸಿಂಧೂರ ಅದ್ಭುತ ಯಶಸ್ಸು ಸಾಧಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ನಡೆದಾಗ ಮೌನವಾಗಿರುತ್ತಿತ್ತು. ಈಗ ಕೆಣಕಿದ್ರೆ ನಮ್ಮ ಪಡೆಗಳು ಆಪರೇಷನ್ ಸಿಂಧೂರ್ ನಡೆಸುತ್ತವೆ. ಪಾಕಿಸ್ತಾನದ ಪ್ರತಿಯೊಂದು ಮೂಲೆಯಿಂದಲೂ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುತ್ತವೆ. ಆದ್ರೆ ಕಾಂಗ್ರೆಸ್ ನಾಯಕರು ಮಾತ್ರ ಪಾಕಿಸ್ತಾನದ ಸೇನೆಯ ಪರವಾಗಿ ನಿಲ್ಲುತ್ತಾರೆ, ಪಾಕಿಸ್ತಾನದ ಅಜೆಂಡಾಗಳನ್ನ ಮುಂದಿಡ್ತಾರೆ. ಪಾಕಿಸ್ತಾನದ ಸುಳ್ಳುಗಳೇ ಕಾಂಗ್ರೆಸ್ ಅಜೆಂಡಾಗಳಾಗುತ್ತವೆ. ಆದ್ದರಿಂದ ಕಾಂಗ್ರೆಸ್ ಬಗ್ಗೆ ಯಾವಾಗಲೂ ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದರು.
ಪ್ರಸ್ತುತ ವಿಶ್ವದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ, ಅಸ್ಸಾಂ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ಹೆಣಗಾಡುತ್ತಿದ್ದ ಅಸ್ಸಾಂ ಈಗ ಗಮನಾರ್ಹ ಬೆಳವಣಿಗೆ ಸಾಧಿಸುತ್ತಿದೆ. 13% ಬೆಳವಣಿಗೆಯ ದರ ಹೊಂದಿದೆ. ಇದು ಅಸ್ಸಾಂ ಜನರ ಕಠಿಣ ಶ್ರಮ ಹಾಗೂ ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಫಲಿತಾಂಶವೂ ಆಗಿದೆ. ದಶಕಗಳ ಕಾಲ ಅಸ್ಸಾಂ ಆಳಿದ ಕಾಂಗ್ರೆಸ್ ಪಕ್ಷವು ಬ್ರಹ್ಮಪುತ್ರ ನದಿಗೆ ಕೇವಲ 3 ಸೇತುವೆಗಳನ್ನು ನಿರ್ಮಿಸಿತು, ಆದ್ರೆ ನಾವು ಕಳೆದ 10 ವರ್ಷಗಳಲ್ಲಿ 6 ಸೇತುವೆಗಳನ್ನು ನಿರ್ಮಿಸಿದ್ದೇವೆ ಎಂದು ಹೇಳಿದರು. ಭಾಷಣದ ವೇಲೆ ಆಪರೇಷನ್ ಸಿಂಧೂರದ ಯಶಸ್ಸನ್ನು ಮೋದಿ ಸ್ಮರಿಸಿದರು.
