ಉದಯವಾಹಿನಿ, ಲಂಡನ್: ಯುನೈಟೆಡ್ ಕಿಂಗ್‌ಡಮ್ ಇತಿಹಾಸದಲ್ಲೇ ಅತಿದೊಡ್ಡ ಬಲಪಂಥೀಯ (ರೈಟ್-ವಿಂಗ್) ಪ್ರತಿಭಟನೆಗೆ ಶನಿವಾರ ಲಂಡನ್ ಸಾಕ್ಷಿಯಾಯಿತು. ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ನಡೆದ ಬೃಹತ್ ʻವಲಸೆ ವಿರೋಧಿʼ ಮೆರವಣಿಗೆಯಲ್ಲಿ ಸುಮಾರು 1,00,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗವಹಿಸಿದ್ದರು. ಈ ವೇಳೆ ಹಲವಾರು ಪೊಲೀಸರ ಮೇಲೆಯೇ ಹಲ್ಲೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಪ್ರತಿಭಟನಾಕಾರರನ್ನು ಚದುರಿಸುತ್ತಿದ್ದ ವೇಳೆ ಸಣ್ಣ ಗುಂಪೊಂದು ಪೊಲೀಸ್ ಅಧಿಕಾರಿಗಳೊಂದಿಗೆ ಘರ್ಷಣೆಗೆ ಇಳಿದಿದೆ. ಈ ವೇಳೆ ರ‍್ಯಾಲಿಯ ಅಂಚಿನಲ್ಲಿದ್ದ ಕೆಲವರು ಖಾಲಿ ಬಾಟಲಿಗಳನ್ನು ಪೊಲೀಸರ ಮೇಲೆ ಎಸೆದಿದ್ದಾರೆ. ಇದರಿಂದ ಕರ್ತವ್ಯದಲ್ಲಿದ್ದ 1,000ಕ್ಕೂ ಹೆಚ್ಚು ಪೊಲೀಸರ ಪೈಕಿ 26 ಮಂದಿ ಗಾಯಗೊಂಡಿದ್ದಾರೆ. ಕೆಲವರಿಗೆ ಹಲ್ಲು ಮುರಿದಿದೆ, ಮೂಗು ಗಾಯವಾಗಿದೆ ಇನ್ನೂ ಕೆಲವರಿಗೆ ಬೆನ್ನು ಮೂಳೆಯಲ್ಲಿ ಸಮಸ್ಯೆಯಾಗಿರುವುದು ಕಂಡುಬಂದಿದೆ. ಪ್ರತಿಭಟನೆ ವೇಳೆ ಹಿಂಸಾತ್ಮಕ ಕೃತ್ಯಕ್ಕೆ ಮುಂದಾದ ಕನಿಷ್ಠ 25 ಜನರನ್ನ ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
