ಉದಯವಾಹಿನಿ, ಮಂಗಳೂರು: ಕೆಎಂಸಿ ಆಸ್ಪತ್ರೆಯ (KMC Hospital) ಗ್ಯಾಸ್ಟ್ರೊಎಂಟರಾಲಾಜಿ (Gastroenterology Department KMC) ಸೇವೆಗೆ 25 ವರ್ಷಗಳಾಗಿದ್ದು, ಈ ಮಹತ್ವದ ಘಟ್ಟವು ಆಸ್ಪತ್ರೆಯ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಸಹಾನುಭೂತಿಯ ರೋಗಿಯ ಆರೈಕೆಯ ಪ್ರತೀಕವಾಗಿದೆ. 2000ರಲ್ಲಿ ಆರಂಭವಾದ ಈ ಸೇವೆಯು ಸುಧಾರಿತ ಡೈಯಾಗ್ನೊಸ್ಟಿಕ್ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆಗಳನ್ನು ನೀಡುತ್ತಿದೆ. ಈ ಮೂಲಕ ಇಲ್ಲಿನ ಪ್ರಾದೇಶಿಕ ನಾಯಕನಾಗಿ ಬೆಳೆದು ನಿಂತಿದೆ ಎಂದು ಗ್ಯಾಸ್ಟ್ರೊಎಂಟರಾಲಾಜಿ (Gastroenterology) ವಿಭಾಗದ ಮುಖ್ಯಸ್ಥ ಡಾ. ಬಿ.ವಿ. ತಂತ್ರಿ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕಳೆದ 25 ವರ್ಷಗಳಿಂದ ನಮ್ಮ ವಿಭಾಗವು ಇಆರ್‍ಸಿಪಿ (ERCP), ಮತ್ತು ಇಯುಎಸ್ (EUS) ನಂತಹ ಸುಧಾರಿತ ಎಂಡೊಸ್ಕೊಪಿಕ್ ಕಾರ್ಯವಿಧಾನಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ಇದು ಕಾಂಪ್ಲೆಕ್ಸ್ ಬಿಲಿಯರಿ ( complex biliary ) ಮತ್ತು ಪ್ಯಾನ್‌ಕ್ರಿಯಾಟಿಕ್ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ಮಹತ್ವದ ಫಲಿತಾಂಶವನ್ನು ದಾಖಲಿಸಲು ನೆರವಾಗಿದೆ. ನಮ್ಮ ಆಸ್ಪತ್ರೆಗೆ ಬರುವ ರೋಗಿಗಳು ಉತ್ತಮ ಆರೈಕೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡಿದ ಕನ್ಸಲ್ಟೆಂಟ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಡಾ. ಸಂದೀಪ್ ಗೋಪಾಲ್, ಮಕ್ಕಳು, ಯುವಜನತೆ ಹಾಗೂ ಮಹಿಳೆಯರಲ್ಲಿ ಐಬಿಡಿ ಎಂದು ಕರೆಯಲ್ಪಡುವ ಇನ್‌ಫ್ಲಾಮೆಟರಿ ಬೌವಲ್ ಡಿಸೀಸ್( ಜೀರ್ಣಾಂಗದ ಕ್ಯಾನ್ಸರ್), ನಾನ್ ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಡಿಸೀಸ್(ಎನ್‌ಎಎಫ್‌ಎಲ್‌ಡಿ) ಮತ್ತು ಲಿವರ್ ಸಿರೊಸಿಸ್ ಸಮಸ್ಯೆ ಆತಂಕಕಾರಿ ಮಟ್ಟದಲ್ಲಿ ಏರಿಕೆ ಕಂಡುಬರುತ್ತಿದೆ. ಇವು ಸಾಮಾನ್ಯವಾಗಿ ಬೊಜ್ಜು ಮತ್ತು ಕಳಪೆ ಆಹಾರ ಪದ್ದತಿಗೆ ಸಂಬಂಧಿಸಿದ್ದಾಗಿರುತ್ತದೆ. ಇಂತಹ ಪ್ರಕರಣಗಳನ್ನು ಶೀಘ್ರ ಚಿಕಿತ್ಸೆಗೆ ಒಳಪಡಿಸಿ ದೀರ್ಘ ಕಾಲದ ಲಿವರ್ ಹಾನಿಗೆ ಒಳಗಾಗದಂತೆ ತಡೆಯುವುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಇನ್ನು ಚಿಕಿತ್ಸೆಗೆ ಲಭ್ಯವಿರುವ ಸಮಗ್ರ ಸೌಲಭ್ಯಗಳ ಕುರಿತು ಮಾತನಾಡಿದ ಕನ್ಸಲ್ಟೆಂಟ್ ಗ್ಯಾಸ್ಟ್ರೊಎಂಟರಾಲಾಜಿಸ್ಟ್ ಡಾ. ಅನುರಾಗ್ ಶೆಟ್ಟಿ, ನಮ್ಮ ವಿಭಾಗ ರೋಗ ನಿರ್ಣಯ (ಡಯಾಗ್ನೊಸ್ಟಿಕ್) ಮತ್ತು ಥೆರೆಪಿಯೊಟಿಕ್ ಚಿಕಿತ್ಸಾ ವಿಧಾನದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಸಾಮಾನ್ಯ ಎಂಡೊಸ್ಕೊಪಿ ಮತ್ತು ಕೊಲೊನೊಸ್ಕೊಪಿಯಿಂದ ಕ್ಲಿಷ್ಟಕರ ಚಿಕಿತ್ಸೆಯವರೆಗೆ ನುರಿತ ತಜ್ಞರು ಹಾಗೂ ಸಿಬ್ಬಂದಿಯ ತಂಡ ಸಮಗ್ರ ಸೇವೆಯನ್ನು ನೀಡುತ್ತಾ ಬಂದಿದೆ. ಈ ಪ್ರದೇಶದಲ್ಲಿ ಸುಧಾರಿತ ಎಂಡೊಸ್ಕೊಪಿಕ್ ಚಿಕಿತ್ಸಾ ವಿಧಾನಗಳಾದ ಇಯುಎಸ್, ಇಆರ್‍ಸಿಪಿ, ಪಿಒಎಮ್, ಮ್ಯಾನೊಮೆಟ್ರಿ ಮತ್ತು ಫೈಬ್ರೊಸ್ಕ್ಯಾನ್ ಚಿಕಿತ್ಸೆಯನ್ನು ಪರಿಚಯಿಸಿದ ಮೊದಲ ಆಸ್ಪತ್ರೆ ನಮ್ಮದು . ಹೆಚ್ಚುತ್ತಿರುವ ಬೊಜ್ಜು ಸಂಬಂಧಿತ ಸಮಸ್ಯೆಗಳನ್ನು ಎದುರಿಸಲು ನಮ್ಮ ಗ್ಯಾಸ್ಟ್ರೊಎಂಟರಾಲಾಜಿ ವಿಭಾಗವು ತೂಕ ಮತ್ತು ತೂಕ ಸಂಬಂಧಿತ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ರೋಗಿಗಳಿಗೆ ಪರಿಹಾರ ಒದಗಿಸುವ ಬ್ಯಾರಿಯಾಟ್ರಿಕ್ ಸರ್ಜರಿ ಹಾಗೂ ಸುಧಾರಿತ ಶಸ್ತ್ರಚಿಕಿತ್ಸಾ ಸೇವೆಗಳಾದ ಲಿವರ್ ಟ್ರಾನ್ಸ್‌ಪ್ಲ್ಯಾಂಟ್ ಸೇವೆಯಲ್ಲಿ ಪರಿಣತಿ ಪಡೆದಿದೆ ಎಂದರು.
