ಉದಯವಾಹಿನಿ, ನವದೆಹಲಿ: ರಿಲಯನ್ಸ್ ಫೌಂಡೇಶನ್ ನಡೆಸುತ್ತಿರುವ ಪ್ರಾಣಿಗಳ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ವನತಾರಾ ಮೇಲಿನ ಆರೋಪಗಳ ಬಗ್ಗೆ ಎಸ್‌ಐಟಿ ಸಲ್ಲಿಸಿದ್ದ ವರದಿಯನ್ನು ಸುಪ್ರೀಂ ಕೋರ್ಟ್‌ ಅಂಗೀಕರಿಸಿ ಕ್ಲೀನ್‌ ಚಿಟ್‌ ನೀಡಿದೆ.
ವನತಾರಾದಲ್ಲಿ ಕಾಡು ಪ್ರಾಣಿಗಳ ಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಆನೆಗಳು ಸೇರಿದಂತೆ ಪ್ರಾಣಿಗಳ ಸ್ವಾಧೀನ ಕಾನೂನು ಪ್ರಕ್ರಿಯೆಗಳ ಅನುಗುಣವಾಗಿಯೇ ನಡೆದಿದೆ ಎಂದು ಎಸ್‌ಐಟಿ ವರದಿ ಸಲ್ಲಿಸಿತ್ತು. ಈ ವರದಿಯನ್ನು ಸುಪ್ರೀಂ ಕೋರ್ಟ್‌ ಅಂಗೀಕರಿಸುವ ಮೂಲಕ ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಕ್ಲೀನ್ ಚಿಟ್ ನೀಡಿದೆ.
ಆನೆಗಳನ್ನು ದೇವಾಲಯಗಳಿಗೆ ಹಿಂತಿರುಗಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸಹ ನ್ಯಾಯಾಲಯವು ತಿರಸ್ಕರಿಸಿತು. ಎಸ್‌ಐಟಿಯ ವರದಿ ಅಂಗೀಕರಿಸಲ್ಪಟ್ಟಿರುವುದರಿಂದ, ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪೀಠ ಹೇಳಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಎಸ್‌ಐಟಿ ತನ್ನ ವರದಿಯನ್ನು ಸಲ್ಲಿಸಿದೆ. ಈ ವರದಿಯನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಅಲ್ಲದೇ ಶೀಘ್ರವಾಗಿ ತನಿಖಾ ವರದಿಯನ್ನು ಸಲ್ಲಿಸಿದ್ದಕ್ಕೆ ಎಸ್‌ಐಟಿಗೆ ಪೀಠ ಮೆಚ್ಚುಗೆ ವ್ಯಕ್ತಪಡಿಸಿದೆ.
ವನತಾರಾ ಪ್ರಾಣಿಗಳನ್ನು ತರಿಸುವಾಗ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಇತರ ಸಂಬಂಧಿತ ಕಾನೂನುಗಳನ್ನು ಗಾಳಿಗೆ ತೂರಿದೆ ಎಂದು ವಕೀಲ ಸಿಆರ್ ಜಯಾ ಸುಕಿನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಪಂಕಜ್ ಮಿಥಲ್ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ನೇತೃತ್ವದ ದ್ವಿಸದಸ್ಯ ಪೀಠ ಆ.25 ರಂದು ವಿಚಾರಣೆ ನಡೆಸಿತ್ತು. ಬಳಿಕ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಚೆಲಮೇಶ್ವರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತ್ತು. ಈ ತಂಡದಲ್ಲಿ ಉತ್ತರಾಖಂಡ ಮತ್ತು ತೆಲಂಗಾಣ ಹೈಕೋರ್ಟ್‌ ಮಾಜಿ ಮುಖ್ಯ ನ್ಯಾಯಾಧೀಶ ರಾಘವೇಂದ್ರ ಚೌಹಾಣ್, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಹಾಗೂ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ಅನಿಶ್ ಗುಪ್ತಾ ಇದ್ದರು. ತನಿಖಾ ವರದಿಯನ್ನು ಸೆ.12ರ ಒಳಗೆ ಸಲ್ಲಿಸುವಂತೆ ಸೂಚಿಸಿತ್ತು. ಎಸ್‍ಐಟಿ ರಚನೆಯನ್ನು ಸ್ವಾಗತಿಸಿದ್ದ ವನ್‍ತಾರಾ, ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇವೆ ಎಂದಿತ್ತು.

Leave a Reply

Your email address will not be published. Required fields are marked *

error: Content is protected !!