ಉದಯವಾಹಿನಿ, ಚಿತ್ತೂರು: ಶಿಕ್ಷಕಿಯೊಬ್ಬರು ತರಗತಿಯಲ್ಲಿ 11 ವರ್ಷದ ಬಾಲಕಿಗೆ ಶಾಲಾ ಬ್ಯಾಗ್‍ನಿಂದ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರಿನ ಶಾಂತ ಪಟ್ಟಣದಲ್ಲಿ ನಡೆದಿದೆ. ಏಟು ಕೊಟ್ಟ ತೀವ್ರತೆಗೆ ವಿದ್ಯಾರ್ಥಿನಿಯ ತಲೆಬುರುಡೆ ಬಿರುಕುಬಿಟ್ಟಿದೆ ಎನ್ನಲಾಗಿದೆ.
ಸ್ಥಳೀಯ ಖಾಸಗಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿರುವ ಸಾತ್ವಿಕ ನಾಗಶ್ರೀ ಎಂಬ ಬಾಲಕಿ ಸೆಪ್ಟೆಂಬರ್ 10 ರಂದು ಹಿಂದಿ ತರಗತಿಯ ಸಮಯದಲ್ಲಿ ಸ್ವಲ್ಪ ದುರ್ವರ್ತನೆ ತೋರಿದ್ದಳು. ಈ ವೇಳೆ ಕೋಪಗೊಂಡ ಶಿಕ್ಷಕಿ ಶಾಲಾ ಚೀಲವನ್ನು ಹಿಡಿದು ವಿದ್ಯಾರ್ಥಿನಿಯ ತಲೆಯ ಮೇಲೆ ಹೊಡೆದಿದ್ದಾರೆ. ಆ ಸಮಯದಲ್ಲಿ ಅದೇನು ಅಂತಹ ದೊಡ್ಡ ವಿಷಯವಲ್ಲ ಎಂದು ತೋರಿದೆ. ಬಾಲಕಿಯ ತಾಯಿ ವಿಜೇತಾ ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.
ತರಗತಿಯಲ್ಲಿ ಇದೆಲ್ಲಾ ಸಾಮಾನ್ಯ ಎಂದು ಬಾಲಕಿಯ ತಾಯಿ ಇದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಆದರೆ, ಬಾಲಕಿಗೆ ತಲೆಗೆ ಹೊಡೆದ ನೋವು ಕಡಿಮೆಯಾಗಲಿಲ್ಲ. ಕೆಲವು ದಿನಗಳ ನಂತರ, ಸಾತ್ವಿಕ ತನಗೆ ತಲೆನೋಯುತ್ತಿರುವ ಬಗ್ಗೆ ಪ್ರತಿದಿನ ದೂರುತ್ತಿದ್ದಳು. ವಿಪರೀತ ತಲೆನೋವಿಗೆ ಆಕೆ ಮೂರು ದಿನ ಶಾಲೆಗೂ ಹೋಗಿರಲಿಲ್ಲ. ಈ ವೇಳೆ ಪೋಷಕರಾದ ವಿಜೇತಾ ಹಾಗೂ ಆಕೆಯ ತಂದೆ ಹರಿ ಅವರಿಗೆ ಏನೋ ಸಮಸ್ಯೆಯಾಗಿದೆ ಎಂಬ ಸಂಶಯ ಬಂದಿದೆ. ಕೂಡಲೇ ಬಾಲಕಿಯನ್ನು ಪುಂಗನೂರಿನ ಖಾಸಗಿ ಚಿಕಿತ್ಸಾಲಯಕ್ಕೆ ಕರೆದೊಯ್ದರು.
