ಉದಯವಾಹಿನಿ, ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳಿಗಾಗಿ ಅವಶ್ಯ ಇರುವ ಜಮೀನಿಗೆ ಪರಿಹಾರ ದರ ನಿಗದಿಗೊಳಿಸಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ನೀರಾವರಿ ಭೂಮಿಗೆ ಪ್ರತಿ ಎಕರೆಗೆ 40 ಲಕ್ಷ ರೂ. ಹಾಗೂ ಒಣ ಭೂಮಿಗೆ ಪ್ರತಿ ಎಕರೆಗೆ 30 ಲಕ್ಷ ರೂ. ದರ ನಿಗದಿ ಮಾಡಿ ಸಚಿವ ಸಂಪುಟ ಸಭೆಯು ನಿರ್ಣಯ ಕೈಗೊಂಡಿದೆ.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ (ಯುಕೆಪಿ) ಯೋಜನೆ ಕುರಿತು ಸುದೀರ್ಘ ಚರ್ಚೆ ನಡೆಸಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕ್ಯಾಬಿನೆಟ್ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಸರ್ಕಾರ ಎಂದೆಂದಿಗೂ ನುಡಿದಂತೆ ನಡೆಯುತ್ತದೆ. ಯುಕೆಪಿ ಹಂತ 3 ಯೋಜನೆಯ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಈ ದಿಸೆಯಲ್ಲಿ ರಾಜ್ಯಕ್ಕೆ ಸಮೃದ್ಧಿ ತರಬಲ್ಲ ಐತಿಹಾಸಿಕ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯುಕೆಪಿ ಹಂತ-3: ರೈತರ ಜೀವನಮಟ್ಟ ಸುಧಾರಣೆ : ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಮತ್ತು ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ. ಗೆ ಏರಿಸಲು ಅನುಮತಿ ನೀಡಲಾಗಿದೆ. ಜಲಾಶಯದ ಎತ್ತರವನ್ನು ಹೆಚ್ಚಿಸುವುದರಿಂದ ಆಲಮಟ್ಟಿಯ ಹಿನ್ನೀರಿನಿಂದ ಸುಮಾರು 75,000 ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುವ ಸಂಭವವಿದೆ. ಇನ್ನು 5.94 ಲಕ್ಷ ಹೆಕ್ಟೇರ್(ಸುಮಾರು 14 ರಿಂದ 15 ಲಕ್ಷ ಎಕರೆ) ಕ್ಕೂ ಹೆಚ್ಚು ಭೂಮಿಗೆ ನೀರಾವರಿ ಕಲ್ಪಿಸಬಹುದಾಗಿದೆ. ಯುಕೆಪಿ ಹಂತ 3 ಬೃಹತ್ ನೀರಾವರಿ ಯೋಜನೆಯಾಗಿದ್ದು, ಈ ಭಾಗದ ರೈತರ ಜಮೀನಿಗೆ ನೀರೊದಗಿಸುವುದರಿಂದ ಅವರ ಜೀವನ ಮಟ್ಟದ ಸುಧಾರಣೆಯಾಗಲಿದೆ ಎಂದರು.
