ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕಿನಲ್ಲಿ ಆಗಮಿಸಿ ಸರಗಳ್ಳತನ ಮಾಡುತ್ತಿದ್ದ ದುಷ್ಕರ್ಮಿಗಳು ಇದೀಗ ಮಹಿಳೆಯರ ಕುತ್ತಿಗೆಗೆ ಲಾಂಗ್ ಇಟ್ಟು ಸರ ಕಸಿದು ಪರಾರಿಯಾಗುತ್ತಿದ್ದಾರೆ. ಕೈಯಲ್ಲಿ ಲಾಂಗ್ ಹಿಡಿದು ಮಹಿಳೆಯರನ್ನು ಬೆದರಿಸಿ ಚಿನ್ನದ ಸರ ಕಳ್ಳತನ ಮಾಡುವ ಇವರ ಕೃತ್ಯ ನೋಡಿದರೆ ಎಂಥವರಿಗೂ ಭಯ ಹುಟ್ಟುತ್ತೆ. ಗಿರಿನಗರ, ಕೋಣನಕುಂಟೆಯ ಆರ್‌ಬಿಐ ಲೇಔಟ್ ನಲ್ಲಿ ಲಾಂಗ್ ಹಿಡಿದು ಸರಗಳ್ಳರು ಕಳ್ಳತನ ಮಾಡಿದ್ದಾರೆ. ಗಿರಿನಗರದಲ್ಲಿ ಲಾಂಗ್ ಬೀಸಿ ವರಲಕ್ಷ್ಮೀ ಎಂಬವರ ಕೈ ಬೆರಳು ತುಂಡರಿಸಿ ಚಿನ್ನದ ಸರ ಕಸಿದು ಪರಾರಿಯಾಗಿದ್ದರು.ಅದೇ ದಿನ ಕೋಣನಕುಂಟೆಯ ಆರ್‌ಬಿಐ ಲೇಔಟ್ ನಲ್ಲೂ ಲಾಂಗ್ ತೋರಿಸಿ ನಡೆದುಕೊಂಡು ಬರುತ್ತಿದ್ದ ಇಬ್ಬರು ಮಹಿಳೆಯರಿಗೆ ಬೆದರಿಸಿ ಸರ ಕಸಿದು ಪರಾರಿಯಾಗಿದ್ದಾರೆ. ಮಹಿಳೆಗೆ ಲಾಂಗ್ ಹಿಡಿದು ಬೆದರಿಸುವ ವೀಡಿಯೊ ಲಭ್ಯವಾಗಿದ್ದು ದರೋಡೆಕೋರರ ಅಟ್ಟಹಾಸ ಭಯ ಹುಟ್ಟಿಸುವಂತಿದೆ. ಸದ್ಯ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
