ಉದಯವಾಹಿನಿ, ಮುಂಬೈ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಭದ್ರತಾ ಪಡೆ ಹಾಗೂ ಮಹಿಳಾ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳಾ ನಕ್ಸಲರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಎಟಪಲ್ಲಿ ತಾಲೂಕಿನ ಮೋಡಸ್ಕೆ ಗ್ರಾಮದ ಪಕ್ಕದಲ್ಲಿರುವ ಕಾಡಿನಲ್ಲಿ ಬುಧವಾರ ಬೆಳಗ್ಗೆ ಎನ್‌ಕೌಂಟರ್ ನಡೆದಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಮೋಡಸ್ಕೆ ಗ್ರಾಮದ ಪಕ್ಕದಲ್ಲಿರುವ ಕಾಡಿನಲ್ಲಿ ಮಾವೋವಾದಿಗಳ ಗಟ್ಟಾ ಲಾಸ್ ಎಂಬ ಸ್ಥಳೀಯ ಸಂಘಟನಾ ತಂಡದ ಕೆಲವು ಸದಸ್ಯರು ಬೀಡುಬಿಟ್ಟಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಮಾಹಿತಿ ಆಧಾರದ ಮೇಲೆ ಗಡ್ಚಿರೋಲಿ ಪೊಲೀಸರ ವಿಶೇಷ ನಕ್ಸಲ್ ವಿರೋಧಿ ಕಮಾಂಡೋ ಸ್ಕ್ವಾಡ್, C-60ಯ ಐದು ಘಟಕಗಳೊಂದಿಗೆ ಪೊಲೀಸರು ಅಹೇರಿ ಗ್ರಾಮದಿಂದ ಕಾರ್ಯಾಚರಣೆ ಪ್ರಾರಂಭಿಸಿದರು. ಜೊತೆಗೆ ಸಿಆರ್‌ಪಿಎಫ್ ಈ ಕಾರ್ಯಾಚರಣೆಗೆ ಸಹಾಯ ಮಾಡಿತು. ಈ ವೇಳೆ ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ತಿಳಿಸಿದ್ದಾರೆ.
ಎನ್‌ಕೌಂಟರ್ ಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಇಬ್ಬರು ಮಹಿಳಾ ನಕ್ಸಲರ ಶವ ಪತ್ತೆಯಾಗಿದೆ. ಜೊತೆಗೆ ಸ್ವಯಂಚಾಲಿತ ಎಕೆ-47 ರೈಫಲ್, ಪಿಸ್ತೂಲ್, ಜೀವಂತ ಮದ್ದುಗುಂಡುಗಳು ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!