ಉದಯವಾಹಿನಿ, ಬೆಂಗಳೂರು: ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬವನ್ನು ಆಚರಿಸಲು ಫ್ಯಾನ್ಸ್ ಸಜ್ಜಾಗಿದ್ದಾರೆ. ಆದರೆ ಬರ್ತ್ ಡೇ ಆಚರಣೆಯ ಖುಷಿಯಲ್ಲಿದ್ದ ಅಭಿಮಾನಿಗಳಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಸಿಕ್ಕಿದೆ. ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಅಭಿಮಾನ್ ಸ್ಟುಡಿಯೋದಲ್ಲಿ ಆಚರಣೆ ಮಾಡುವಂತಿಲ್ಲ ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ. ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನೆರವೇರಿದ್ದರಿಂದ ಒಂದು ಭಾವನಾತ್ಮಕ ಎಮೋಷನ್ಸ್ ಎಲ್ಲರಲ್ಲೂ ಇದೆ. ಹಾಗಾಗಿ ಅದೇ ಜಾಗವನ್ನು ಅಭಿಮಾನಿಗಳು ವಿಷ್ಣುದಾದಾ ಸಮಾಧಿ ಎಂದು ಪೂಜಿಸುತ್ತಾ ಬಂದಿದ್ದರು. ಪ್ರತಿ ವರ್ಷವೂ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಅಭಿಮಾನ್ ಸ್ಟುಡಿಯೋಕ್ಕೆ ತೆರಳಿ ಅವರನ್ನು ಸ್ಮರಿಸುತ್ತಿದ್ದರು. ಆದರೆ ಇದೀಗ ಈ ವಿಚಾರ ಕೇಳಿ ಫ್ಯಾನ್ಸ್ ಬೇಸರಗೊಂಡಿದ್ದಾರೆ.
ಉತ್ತರಹಳ್ಳಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಲಾಗಿದೆ. ವಿಷ್ಣುವರ್ಧನ್ ಅಂತ್ಯಕ್ರಿಯೆ ಆ ಸ್ಥಳದಲ್ಲಿ ಆದಾಗಿನಿಂದಲೂ ಆ ಜಾಗ ವಿವಾದದಲ್ಲಿಯೇ ಇದೆ. ಈ ಮಧ್ಯೆ ಅಭಿಮಾನ್ ಸ್ಟುಡಿಯೋ ಅರಣ್ಯ ಇಲಾಖೆ ಸೇರಿದ್ದು ಎಂದು ಸರ್ಕಾರ ಘೋಷಣೆ ಮಾಡಿದೆ. ಸದ್ಯ ಅಭಿಮಾನ್ ಸ್ಟುಡಿಯೋ ವಿವಾದ ಕೋರ್ಟ್‌ನಲ್ಲಿದೆ. ವಿಷ್ಣು ಹುಟ್ಟುಹಬ್ಬವನ್ನು ಅಭಿಮಾನ್ ಸ್ಟುಡಿಯೋದಲ್ಲಿಯೇ ಆಚರಿಸಲು ಅಭಿಮಾನಿಗಳು ಪ್ಲಾನ್ ಮಾಡಿದ್ದರು. ಆದರೆ ಕೋರ್ಟ್ ಇದೀಗ ಆಚರಣೆ ಮಾಡಲು ಕೂಡ ತಡೆಯಾಜ್ಞೆ ನೀಡಿದೆ.
ಅಭಿಮಾನ್ ಸ್ಟುಡಿಯೋ ಖಾಸಗಿ ಸ್ಥಳವಾದ ಕಾರಣ ಅಲ್ಲಿ ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆ ಮಾಡುವಂತಿಲ್ಲ ಎಂದು ನ್ಯಾಯಾಲಯ ಇದೀಗ ಸ್ಪಷ್ಟನೆ ಪಡಿಸಿದೆ. ಅದೇ ರೀತಿ ಕೆಂಗೇರಿಯಲ್ಲೂ ವಿಷ್ಣು ಹುಟ್ಟುಹಬ್ಬ ಆಚರಣೆಗೆ ಪೊಲೀಸರು ಅನುಮತಿ ನೀಡಿಲ್ಲ ಎಂದು ವಿಷ್ಣು ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಭಾವನಾತ್ಮಕವಾಗಿ ಅಭಿಮಾನ್ ಸ್ಟುಡಿಯೋದಿಂದ 100 ಮೀಟರ್ ಅಂತರದಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡುವುದಕ್ಕೆ ನಿರ್ಧರಿಸಲಾಗಿದೆ. ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆಗೆ ಯಾರೋ ಪ್ರಭಾವಿಗಳು ಉದ್ದೇಶಪೂರ್ವಕವಾಗಿ ಅಡ್ಡಿ ಮಾಡುತ್ತಿದ್ದಾರೆ ಎಂದು ಕೂಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
