ಉದಯವಾಹಿನಿ, ಬೆಂಗಳೂರು : ಬೆಂಗಳೂರಿನಲ್ಲಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಯೋಗ ಗುರು ನಿರಂಜನಾ ಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿ ಪೋಕ್ಸೋ ಕೇಸ್ ಹಾಕಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಯೋಗ ಸೆಂಟರ್ ನಡೆಸುತ್ತಿದ್ದ ನಿರಂಜನಾ ಮೂರ್ತಿ ಎಂಬಾತ ಯೋಗ ಕ್ಲಾಸ್‌ಗೆ ಸೇರಿದ್ದ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದಲ್ಲದೆ ಆರೋಪಿ ನಿರಂಜನ ಮೂರ್ತಿ ಇನ್ನೂ ಏಳೆಂಟು ಮಹಿಳೆಯರ ಮೇಲೂ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಬಾಲಕಿಯರಿಗೂ ಈತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ. ಬಾಲಕಿಯೊಬ್ಬಳ ದೂರಿನ ಅನ್ವಯ ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ರಾಜರಾಜೇಶ್ವರಿ ಪೊಲೀಸರಿಂದ ವಿಚಾರಣೆ ಮುಂದುವರೆದಿದೆ.
ಯೋಗ ಗುರು ನಿರಂಜನಾ ಮೂರ್ತಿ ರಾಜರಾಜೇಶ್ವರಿ ನಗರದಲ್ಲಿ ಯೋಗ ಕೇಂದ್ರ ನಡೆಸುತ್ತಿದ್ದ. ನಿಮಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದಲ್ಲಿ ಹೆಸರು ಬರುವಂತೆ ಮಾಡುತ್ತೇನೆ. ನಿಮಗೆ ಆದರಿಂದ ಸರ್ಕಾರಿ ಕೆಲಸವು ಸಿಗಬಹುದು ಎಂದು ನಂಬಿಸಿ, ಯೋಗ ಸೆಂಟರ್ಗೆ ಬರುತ್ತಿದ್ದ ಯುವತಿಯರು ಸೇರಿದಂತೆ ಸುಮಾರು ಏಳೆಂಟು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ. ಕೇಸ್ ದಾಖಲಾಗುತ್ತಿದ್ದಂತೆ ಇತ್ತ ಆರೋಪಿ ತಲೆಮರಿಸಿಕೊಂಡಿದ್ದ. ಸದ್ಯ ಪೊಲೀಸರು ಹುಡುಕಿ ಆತನನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಅತ್ಯಾಚಾರ ಎಸಗಿರುವುದು ಬಯಲಾಗಿದೆ.
