ಉದಯವಾಹಿನಿ, ಚಂಡೀಗಢ: 75 ವರ್ಷದ ಅನಿವಾಸಿ ಭಾರತೀಯನನ್ನು ಮದುವೆಯಾಗಲು ಪಂಜಾಬ್‌ಗೆ ಬಂದಿದ್ದ 71 ವರ್ಷದ ಅಮೆರಿಕ ಪ್ರಜೆ ಮಹಿಳೆಯನ್ನು ಹತ್ಯೆ ಮಾಡಲಾಗಿದೆ. ಜುಲೈನಲ್ಲಿ ಘಟನೆ ನಡೆದಿದೆ. ಮಹಿಳೆಯ ನಾಪತ್ತೆಗೆ ಸಂಬಂಧಿಸಿದಂತೆ ಲುಧಿಯಾನ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರ ಇತ್ತೀಚೆಗೆ ಬೆಳಕಿಗೆ ಬಂದಿದೆ. ರೂಪಿಂದರ್ ಕೌರ್ ಪಂಧೇರ್ ಇಂಗ್ಲೆಂಡ್‌ನವರು. ಚರಣ್‌ಜಿತ್ ಸಿಂಗ್ ಗ್ರೆವಾಲ್ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 24ರಂದು ಪಂಧೇರ್ ಅವರ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಇದು ಅವರ ಸಹೋದರಿ ಕಮಲ್ ಕೌರ್ ಖೈರಾರಲ್ಲಿ ಅನುಮಾನ ಮೂಡಿಸಿತ್ತು.
ಜುಲೈ 28ರ ಹೊತ್ತಿಗೆ, ಖೈರಾ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು. ಸ್ಥಳೀಯ ಪೊಲೀಸರು ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಒತ್ತಡ ಹೇರಿದರು.‌ ಕಳೆದ ವಾರವಷ್ಟೇ ಖೈರಾ ಕುಟುಂಬಕ್ಕೆ ಆಕೆಯ ಸಾವಿನ ಸುದ್ದಿ ತಿಳಿಯಿತು. ಅಮೆರಿಕ ಪ್ರಜೆಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಮಲ್ಹಾ ಪಟ್ಟಿಯ ಸುಖ್‌ಜೀತ್ ಸಿಂಗ್ ಸೋನು ಎಂಬಾತನನ್ನು ಬಂಧಿಸಿದ್ದಾರೆ. ಪಂಧೇರ್ ಅವರನ್ನು ಅವರ ಮನೆಯಲ್ಲಿ ಕೊಂದು ಶವವನ್ನು ಅಂಗಡಿ ಕೋಣೆಯಲ್ಲಿ ಸುಟ್ಟುಹಾಕಿದ್ದಾಗಿ ಸೋನು ಒಪ್ಪಿಕೊಂಡಿದ್ದಾನೆ.
ಪಂಧೇರ್ ಅವರನ್ನು ಕೊಲ್ಲಲು 50 ಲಕ್ಷ ರೂ. ನೀಡುವುದಾಗಿ ಗ್ರೇವಾಲ್ ಭರವಸೆ ನೀಡಿದ್ದರು. ಅವರ ಸೂಚನೆಯ ಮೇರೆಗೆ ಸೋನು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಧೇರ್ ಕೊಲೆಗೆ ಹಣಕಾಸಿನ ಉದ್ದೇಶವಿತ್ತು. ಗ್ರೇವಾಲ್ ಭೇಟಿ ನೀಡುವ ಮೊದಲು ಪಂಧೇರ್ ಸಾಕಷ್ಟು ಹಣ ವರ್ಗಾಯಿಸಿದ್ದರು.ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಗ್ರೇವಾಲ್‌ನನ್ನು ಶಂಕಿತ ಆರೋಪಿ ಎಂದು ಹೆಸರಿಸಲಾಗಿದೆ ಎಂದು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಲುಧಿಯಾನ ಪೊಲೀಸ್ ರೇಂಜ್) ಸತೀಂದರ್ ಸಿಂಗ್ ದೃಢಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!