ಉದಯವಾಹಿನಿ, ಟೋಕಿಯೋ:  ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ನೀರಸ ಪ್ರದರ್ಶನ ತೋರುವ ಮೂಲಕ 8ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇದೀಗ ಅವರ ತಮ್ಮ ಈ ಕಳಪೆ ಪ್ರದರ್ಶನಕ್ಕೆ ಫಿಟ್ನೆಸ್‌ ಮತ್ತು ಗಾಯದ ಸಮಸ್ಯೆಯೇ ಕಾರಣ ಎಂದು ತಿಳಿಸಿದ್ದಾರೆ.
ಸ್ಫರ್ಧೆಯ ಬಳಿಕ ಮಾತನಾಡಿದ ನೀರಜ್‌, ಟೋಕಿಯೋಗೆ ಬರುವ ಎರಡು ವಾರದ ಹಿಂದೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಆದರೆ ಇದನ್ನು ಯಾರಿಗೂ ಹೇಳಿರಲಿಲ್ಲ. ಸ್ಪರ್ಧೆಯಲ್ಲಿ ಉತ್ತಮ ನಿರ್ವಹಣೆ ತೋರುವ ವಿಶ್ವಾಸವಿತ್ತು. ಅರ್ಹತಾ ಸುತ್ತಿನಲ್ಲಿ ತೋರಿದ ಪ್ರದರ್ಶನದ ವಿಶ್ವಾಸದಲ್ಲಿ ಫೈನಲ್‌ನಲ್ಲಿಯೂ ಕಣಕ್ಕಿಳಿದೆ. ಆದರೆ ಇಲ್ಲಿ ಏನಾಯಿತು ಎಂದೇ ಅರ್ಥವಾಗಲಿಲ್ಲ. ದೀರ್ಘಕಾಲದಿಂದ ಈ ರೀತಿ ಆಗಿರಲಿಲ್ಲ ಎಂದು ಹೇಳಿ ಭಾವುಕರಾದರು.
2018ರಿಂದ ಸ್ಪರ್ಧಿಸಿದ ಎಲ್ಲಾ ಕೂಟಗಳಲ್ಲೂ ನೀರಜ್ ಪದಕ ಗೆದ್ದಿದ್ದರು. ಇದರಲ್ಲಿ ಒಲಿಂಪಿಕ್ಸ್, ಕಾಮನ್‌ವೆಲ್ತ್, ವಿಶ್ವ ಚಾಂಪಿಯನ್‌ಶಿಪ್ ಪದಕಗಳೂ ಸೇರಿತ್ತು. ಮುಖ್ಯವಾಗಿ, 2021ರಿಂದ ನೀರಜ್ ಎಲ್ಲಾ ಸ್ಪರ್ಧೆಗಳಲ್ಲೂ ಚಿನ್ನ ಅಥವಾ ಬೆಳ್ಳಿ ಗೆದ್ದಿದ್ದರು. ಆದರೆ ಕಳೆದ 7 ವರ್ಷಗಳಲ್ಲಿ ಇದೇ ಮೊದಲ ಬಾರಿ ಅವರು ಅಗ್ರ-3ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾದರು. 2021ರಲ್ಲಿ ಟೋಕಿಯೋದ ಇದೇ ಟ್ರ್ಯಾಕ್‌ನಲ್ಲಿ ಐತಿಹಾಸಿಕ ಒಲಿಂಪಿಕ್ಸ್ ಚಿನ್ನ ಗೆದ್ದಿದ್ದ ನೀರಜ್ ಮತ್ತೆ ಚಾಂಪಿಯನ್ ಆಗುವ ನಿರೀಕ್ಷೆಯಿತ್ತು. ಆದರೆ ಈ ನಿರೀಕ್ಷೆ ಹುಸಿಯಾಯಿತು.
ಟ್ರಿನಿಡಾಡ್ ಆ್ಯಂಡ್ ಟೊಬಾಗೋದ ಕೋಶೋರ್ನ್ ವಾಲೊಟ್ (88.16 ಮೀ.) ಚಿನ್ನ ಗೆದ್ದರೆ, 2 ಬಾರಿ ವಿಶ್ವ ಚಾಂಪಿಯನ್, ಗ್ರೆನಡಾದ ಆ೦ಡರ್‌ಸನ್ ಪೀಟರ್ಸ್(87.38 ಮೀ.) ಬೆಳ್ಳಿ, ಅಮೆರಿಕದ ಕರ್ಟಿಸ್ ಥಾಂಪ್ಸನ್ (86.67 ಮೀ.) ಬೆಳ್ಳಿ ಪಡೆದರು.

Leave a Reply

Your email address will not be published. Required fields are marked *

error: Content is protected !!