ಉದಯವಾಹಿನಿ, ಮಧ್ಯಪ್ರದೇಶ: ಹಸುವಿನ ಜೊತೆ ಅಸ್ವಾಭಾವಿಕ ಕೃತ್ಯ ಎಸಗಿದ ವ್ಯಕ್ತಿಯೊಬ್ಬನಿಗೆ ಶೂಗಳ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಶನಿವಾರ ನಡೆದಿದೆ. ಸ್ಥಳೀಯ ಹಿಂದುತ್ವ ಸಂಘಟನೆಯ ಸದಸ್ಯರು ಹಸುವಿನ ಜೊತೆ ಅಸ್ವಾಭಾವಿಕ ಕೃತ್ಯ ಎಸಗಿದ್ದಾನೆಂದು ಆರೋಪಿಸಿ ಮೊಹಮ್ಮದ್ ಶಾಹಿದ್ (55) ಎಂಬಾತನಿಗೆ ಶೂಗಳ ಹಾರ ಹಾಕಿಸಿ ಮೆರವಣಿಗೆ ಮಾಡಿಸಿದ್ದಾರೆ. ಆರೋಪಿ ವಿರುದ್ಧ ನಲಖೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಲಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯ ಮಾರುಕಟ್ಟೆ ಪ್ರದೇಶದಲ್ಲಿ ಮೊಹಮ್ಮದ್ ಶಾಹಿದ್ ನನ್ನು ಹಿಂದುತ್ವ ಸಂಘಟನೆಯ ಸದಸ್ಯರು ಶೂಗಳ ಹಾರ ಹಾಕಿಸಿ ಮೆರವಣಿಗೆ ನಡೆಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಆರೋಪಿಯನ್ನು ಪೊಲೀಸರು ಬಂಧಿಸಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಬ್-ಇನ್ಸ್‌ಪೆಕ್ಟರ್ ಸರ್ದಾರ್ ಸಿಂಗ್ ಪರ್ಮಾರ್, ಆರೋಪಿ ಮೊಹಮ್ಮದ್ ಶಾಹಿದ್ ನನ್ನು ಬರಗಾಂವ್ ಪೊಲೀಸ್ ಔಟ್‌ಪೋಸ್ಟ್‌ಗೆ ಕರೆತರಲಾಗಿದ್ದು ಆತನ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು ಬಿಎನ್‌ಎಸ್‌ಎಸ್‌ನ ಸೆಕ್ಷನ್ 170 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಶಾಹಿದ್ ಮೆರವಣಿಗೆ ನಡೆಸಿಲ್ಲ. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದರು.
ನಲಖೇಡಾ ಠಾಣೆಯ ಉಸ್ತುವಾರಿ ನಾಗೇಶ್ ಯಾದವ್ ಅವರು ಪ್ರತಿಕ್ರಿಯಿಸಿ ಆರೋಪಿಗೆ ನೋಟೀಸ್ ನೀಡಿ ಸಕ್ಷಮ ತಹಶೀಲ್ದಾರ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅಲ್ಲಿಂದ ಆತನನ್ನು ಬಿಎನ್‌ಎಸ್‌ಎಸ್ ಅಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.
