ಉದಯವಾಹಿನಿ, ನವದೆಹಲಿ: ಪಾಕಿಸ್ತಾನ ತಂಡವನ್ನು ಆರು ವಿಕೆಟ್‌ಳಿಂದ ಮಣಿಸುವ ಮೂಲಕ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಭಾರತ ತಂಡದ ಗೆಲುವಿನ ಪಯಣ ಮುಂದುವರಿದಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಎಲ್ಲಾ ಸ್ವರೂಪದಲ್ಲಿಯೂ ಟೀಮ್ ಇಂಡಿಯಾಗೆ ಸತತ ಏಳನೇ ಗೆಲುವು ಇದಾಗಿದೆ. ಆ ಮೂಲಕ ಏಷ್ಯಾ ಕಪ್ ಫೈನಲ್‌ಗೆ ಇನ್ನಷ್ಟು ಸನಿಹವಾಗಿದೆ. ಇದೀಗ ಭಾರತ ತಂಡ, ಸೆಪ್ಟಂಬರ್ 24ರಂದು ಬಾಂಗ್ಲಾದೇಶ ವಿರುದ್ಧ (IND vs BAN) ತನ್ನ ಎರಡನೇ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಈ ಪಂದ್ಯವೂ ಕೂಡ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ XI (India’s Playing XI) ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಸೆಪ್ಟಂಬರ್ 21 ರಂದು ಇದೇ ಅಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 171 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಟೀಮ್ ಇಂಡಿಯಾ ಅಭಿಷೇಕ್ ಶರ್ಮಾ ಅವರ ಅರ್ಧಶತಕದ ಬಲದಿಂದ 18.5 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 174 ರನ್‌ಗಳನ್ನು ಗಳಿಸಿ ಗೆದ್ದು ಬೀಗಿತ್ತು. ಪಾಕಿಸ್ತಾನ ತಂಡದ ಪರ ಸಾಹಿಬಜಾದ್ ಫರ್ಹಾನ್ ಸ್ಪೋಟಕ ಅರ್ಧಶತಕ ಸಿಡಿಸಿದ್ದರು.
ಜಸ್‌ಪ್ರೀತ್ ಬುಮ್ರಾ ಔಟ್, ಅರ್ಷದೀಪ್ ಸಿಂಗ್ ಇನ್?
ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಎದುರಾಳಿ ತಂಡವನ್ನು ನೋಡಿಕೊಂಡು ಪದೇ ಪದೆ ಬದಲಾವಣೆಯನ್ನು ತರಲಾಗುತ್ತಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆಯನ್ನು ತರಬಹುದು. ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಕಾರಣ ಜಸ್‌ಪ್ರೀತ್ ಬುಮ್ರಾಗೆ ಬಾಂಗ್ಲಾ ಪಂದ್ಯದಲ್ಲಿ ವಿಶ್ರಾಂತಿಯನ್ನು ನೀಡಬಹುದು. ಮತ್ತೊಂದೆಡೆ ಅವರು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಿಗೆ ವಿಕೆಟ್ ಇಲ್ಲದೆ 45 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಹಾಗಾಗಿ ಬಾಂಗ್ಲಾದೇಶ ಪಂದ್ಯಕ್ಕೆ ಅರ್ಷದೀಪ್ ಸಿಂಗ್‌ಗೆ ಅವಕಾಶ ನೀಡಬಹುದು. ಅರ್ಷದೀಪ್ ಸಿಂಗ್ ಒಮಾನ್ ವಿರುದ್ಧದ ಪಂದ್ಯದಲ್ಲಿ ಒಂದು ವಿಕೆಟ್ ಕಿತ್ತಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದರು.
