ಉದಯವಾಹಿನಿ, ಬೆಂಗಳೂರು: ಇಬ್ಲೂರು ಜಂಕ್ಷನ್ ಹೊರ ವರ್ತುಲ ರಸ್ತೆ ಕಾರಿಡಾರ್‌ನಲ್ಲಿ ಟ್ರಾಫಿಕ್ ಸಮಸ್ಯೆಗೆ ವಿಪ್ರೋ ಕ್ಯಾಂಪಸ್ ಮೂಲಕ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಿದೆ. ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನಗಳ ಸಂಚಾರ ಬಳಕೆಗೆ ಸಂಬಂಧಿಸಿದಂತೆ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜೀಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಔಟರ್ ರಿಂಗ್ ರೋಡ್ ಟ್ರಾಫಿಕ್ ಸಮಸ್ಯೆ ಒಂದು. ಇಬ್ಲೂರು ಜಂಕ್ಷನ್‌ನಲ್ಲಿರುವ ಹೊರವರ್ತುಲ ರಸ್ತೆ ಕಾರಿಡಾರ್‌ನಲ್ಲಿ ಪೀಕ್ ಅವರ್‌ನಲ್ಲಿ ತೀವ್ರ ಸಂಚಾರ ದಟ್ಟಣೆ ಇದೆ. ಇದು ಚಲನಶೀಲತೆ, ಉತ್ಪಾದಕತೆ, ನಗರ ಜೀವನದ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಗಳ ವರದಿಯನ್ನ ಅಧಿಕಾರಿಗಳು ನೀಡಿದ್ದಾರೆ. ಪರಸ್ಪರ ಒಪ್ಪಿತ ನಿಯಮಗಳು ಮತ್ತು ಅಗತ್ಯ ಭದ್ರತಾ ಪರಿಗಣನೆಗಳಿಗೆ ಒಳಪಟ್ಟು ವಿಪ್ರೋ ಕ್ಯಾಂಪಸ್‌ನಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲು ಸಾಧ್ಯತೆಗಳಿವೆ. ಇದರಿಂದಾಗಿ ವಿಶೇಷವಾಗಿ ಕಚೇರಿಗಳ ಪೀಕ್ ಅವರ್‌ನಲ್ಲಿ, ಸುಮಾರು 30% ರಷ್ಟು ದಟ್ಟಣೆಯನ್ನು ಕಡಿಮೆ ಮಾಡುತ್ತದೆ.
ನಿಮ್ಮ ಸಹಕಾರದಿಂದ ಸಂಚಾರ ಅಡಚಣೆಗಳನ್ನು ನಿವಾರಿಸಬಹುದು. ವಾಸಯೋಗ್ಯ ಬೆಂಗಳೂರಿಗೆ ಕೊಡುಗೆ ನೀಡುವಲ್ಲಿ ಬಹಳ ಸಹಾಯ ಮಾಡುತ್ತದೆ. ನಿಮ್ಮ ತಂಡವು ನಮ್ಮ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಪರಸ್ಪರ ಸ್ವೀಕಾರಾರ್ಹವಾದ ಯೋಜನೆಯನ್ನ ಆದಷ್ಟು ಬೇಗ ರೂಪಿಸಲು ನಾನು ಕೃತಜ್ಞನಾಗಿದ್ದೇನೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸೆ.19 ಶುಕ್ರವಾರದಂದು ನಡೆದಿದ್ದ ಸಭೆಯಲ್ಲಿ ವಿಪ್ರೋ ಕ್ಯಾಂಪಸ್ ಬಳಕೆಗೆ ಸಂಬಂಧ ಅಧಿಕಾರಿಗಳು ಪ್ರಸ್ತಾಪ ಇಟ್ಟಿದ್ರು ಎನ್ನಲಾಗಿದ್ದು, ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜೀಗೆ ಪತ್ರ ಬರೆಯುವಂತೆ ಸಲಹೆಯೂ ಕೇಳಿಬಂದಿತ್ತು. ಹಾಗಾಗಿ ಸೆ.19ರಂದೇ ಸಿಎಂ ಪತ್ರ ಬರೆದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!