ಉದಯವಾಹಿನಿ, ವಾಷಿಂಗ್ಟನ್‌: ಡೊನಾಲ್ಡ್ ಟ್ರಂಪ್ ಜಾರಿಗೆ ತಂದ H-1B ವೀಸಾಗಳಿಗೆ (H-1B Visa) $100,000 (ಸುಮಾರು ರೂ. 8.8 ಮಿಲಿಯನ್) ಹೊಸ ಶುಲ್ಕ ಭಾರತೀಯರಿಗೆ ಭಾರೀ ಶಾಕ್‌ ತಂದಿತ್ತು. ಇದೀಗ ಭಾರತೀಯ ವೃತ್ತಿಪರರಿಗೆ ಅಮೆರಿಕದಿಂದ ಸ್ವಲ್ಪ ಪರಿಹಾರ ಬಂದಿದೆ. ವೈದ್ಯರು ಮತ್ತು ವೈದ್ಯಕೀಯ ನಿವಾಸಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಬಹುದು ಎಂದು ಶ್ವೇತಭವನ ತಿಳಿಸಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಶ್ವೇತಭವನದ ವಕ್ತಾರ ಟೇಲರ್ ರೋಜರ್ಸ್, “ಈ ಘೋಷಣೆಯು ಸಂಭಾವ್ಯ ವಿನಾಯಿತಿಯನ್ನು ಒದಗಿಸುತ್ತದೆ, ಇದರಲ್ಲಿ ವೈದ್ಯರು ಮತ್ತು ವೈದ್ಯಕೀಯ ನಿವಾಸಿಗಳು ಸೇರಿರಬಹುದು” ಎಂದು ಹೇಳಿದ್ದಾರೆ.
ಅಮೆರಿಕದ ಮೆಡಿಕಲ್ ಅಸೋಸಿಯೇಷನ್ ​​ಅಧ್ಯಕ್ಷ ಬಾಬಿ ಮುಕ್ಕಮಲ H-1B ವೀಸಾದ ಮೇಲಿನ ಶುಲ್ಕ ಏರಿಕೆ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಈ ನಿರ್ಧಾರವು ರೋಗಿಗಳ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದರು. ಈಗಾಗಲೇ ಭಾರತೀಯರು ಸೇರಿದಂತೆ ಹಲವರು ವೈದ್ಯಕೀಯ ವೃತ್ತಿಪರರು ಅಮೆರಿಕದಲ್ಲಿ ನೆಲೆಸಿದ್ದಾರೆ. ಈ ವಿನಾಯಿತಿಯಿಂದ ಹಲವರಿಗೆ ಅನುಕೂಲಕರವಾಗಲಿದೆ.
ಟ್ರಂಪ್ ಶುಲ್ಕವನ್ನು ಘೋಷಿಸಿದ ನಂತರ, ಮೈಕ್ರೋಸಾಫ್ಟ್, ಜೆಪಿ ಮಾರ್ಗನ್ ಮತ್ತು ಅಮೆಜಾನ್ ಕಂಪನಿಗಳು ಎಚ್1ಬಿ ವೀಸಾಗಳನ್ನು ಹೊಂದಿರುವ ತಮ್ಮ ಉದ್ಯೋಗಿಗಳಿಗೆ ಅಮೆರಿಕವನ್ನು ತೊರೆಯದಂತೆ ಸೂಚಿಸಿವೆ. ಇದಲ್ಲದೆ ಡೊನಾಲ್ಡ್ ಟ್ರಂಪ್ ಆದೇಶ ಜಾರಿಗೆ ಬರುವ ಸೆಪ್ಟೆಂಬರ್ 21 ರ ಬೆಳಿಗ್ಗೆ 12 ಗಂಟೆಯೊಳಗೆ ಅಮೆರಿಕಕ್ಕೆ ಮರಳುವಂತೆ ಅಮೆಜಾನ್ ತನ್ನ ಉದ್ಯೋಗಿಗಳಿಗೆ ಹೇಳಿದೆ ಎಂದು ಮಾಹಿತಿ ಸಿಕ್ಕಿದೆ. 2016 ರ ಬಳಿಕ ಮೊದಲ ಬಾರಿಗೆ 2024ರ ಫೆಬ್ರವರಿ 1 ರಂದು ವಲಸಿಗರಲ್ಲದವರಿಗೆ ನೀಡುವ ಎಲ್​-1 ಹಾಗು ಇಬಿ-5 ವಿಸಾಗಳ ಶುಲ್ಕಗಳ ಮೇಲೆ ಅಮೆರಿಕ ಶುಲ್ಕವನ್ನು ಏರಿಸಿತ್ತು.

Leave a Reply

Your email address will not be published. Required fields are marked *

error: Content is protected !!