ಉದಯವಾಹಿನಿ, ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಎಡಗಾಲಿನ ಮೂಳೆ ಮುರಿತಕ್ಕೆ ಒಳಗಾಗಿದ್ದ ರಿಷಭ್ ಪಂತ್ ಅವರು ಮುಂದಿನ ತಿಂಗಳು, ಅ.2ರಿಂದ ತವರಿನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ.
ಪಂತ್ ಸದ್ಯ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ. ಪಂತ್ ಬದಲು ಧೃವ್ ಜುರೆಲ್ ಕೀಪರ್-ಬ್ಯಾಟರ್ ಆಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಉಪನಾಯಕನ ಸ್ಥಾನವನ್ನು ಕನ್ನಡಿಗ ಕೆ.ಎಲ್ ರಾಹುಲ್‌ಗೆ ನೀಡಲು ಆಯ್ಕೆ ಸಮಿತಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇಂಗ್ಲೆಂಡ್ ಸರಣಿಯಲ್ಲಿ ರಾಹುಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಮೀಸಲು ಕೀಪರ್ ಆಗಿ ತಮಿಳುನಾಡಿನ ಎನ್.ಜಗದೀಶನ್ ಸ್ಥಾನ ಪಡೆಯಬಹುದು. ಇಂಗ್ಲೆಂಡ್ ಸರಣಿಯಲ್ಲಿ ಪಂತ್ ಗಾಯಗೊಂಡು ಹೊರಬಿದ್ದಾಗಲೂ ಎನ್.ಜಗದೀಶನ್ ಬದಲಿ ಆಟಗಾರನಾಗಿ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಆಡುವ ಬಳಗದಲ್ಲಿ ಸ್ಥಾನ ಲಭಿಸಿರಲಿಲ್ಲ.
