ಉದಯವಾಹಿನಿ, ಅಗ್ನಿಸಾಕ್ಷಿ, ಸೀತಾ ರಾಮ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ನಟಿ ವೈಷ್ಣವಿ ಗೌಡ (Vaishnavi Gowda) ಇತ್ತೀಚೆಗಷ್ಟೆ ಹಸೆಮಣೆ ಏರಿದ್ದರು. ಏಪ್ರಿಲ್ 14ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೈಶು, ಅನುಕೂಲ್ ಮಿಶ್ರಾ ಜೊತೆಗೆ ಜೂನ್ 4 ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವೈಷ್ಣವಿ ಅವರ ಪತಿ ಅನುಕೂಲ್ ಮಿಶ್ರಾ ಅವರು ಇಂಡಿಯನ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈಷ್ಣವಿ ಇನ್ಮುಂದೆ ಕರ್ನಾಟಕದಲ್ಲಿ ಇರಲ್ಲ, ಯಾವುದೇ ಸೀರಿಯಲ್ನಲ್ಲಿ ಕಾಣಿಸಲ್ಲ ಎನ್ನಲಾಗಿತ್ತು. ಬಳಿಕ ‘‘ಕರ್ನಾಟಕದ ಜನ ನನಗೆ ಇಷ್ಟೊಂದು ಪ್ರೀತಿ ಕೊಟ್ಟಿದ್ದಾರೆ, ಅದೆಲ್ಲ ಮರೆಯಲು ಸಾಧ್ಯ ಇಲ್ಲ. ನನ್ನ ದೇಶ, ನನ್ನ ಜಾಗದಲ್ಲಿ ನನಗೆ ಇಷ್ಟೆಲ್ಲ ಸಿಗುತ್ತಿರುವಾಗ ನಾನ್ಯಾಕೇ ಬೇರೆಕಡೆ ಹೋಗಬೇಕು. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಕನ್ನಡ ಇಂಡಸ್ಟ್ರೀಯಲ್ಲಿಯೇ ಕೆಲಸ ಮಾಡುತ್ತೇನೆ, ಕಲಾ ಸೇವೆಯನ್ನು ಮಾಡುತ್ತೇನೆ, ನಿಮ್ಮೆಲ್ಲರನ್ನು ಮನರಂಜಿಸುವ ಕೆಲಸವನ್ನು ಮಾಡುತ್ತೇನೆ’’ ಎಂದು ಹೇಳಿದ್ದರು.
ಅದರಂತೆ ಇದೀಗ ವೈಶು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆಯಾದ ಮೂರು ತಿಂಗಳ ನಂತರ ವೈಷ್ಣವಿ ನಟನೆಗೆ ಮರಳಿದ್ದಾರೆ. ಆದರೆ, ಇವರು ಕಾಣಿಸಿಕೊಳ್ಳುತ್ತಿರುವುದು ಸಿನಿಮಾ ಅಥವಾ ಧಾರಾವಾಹಿಯಲ್ಲಲ್ಲ. ಬದಲಿಗೆ ಸದ್ಯ ಸಖತ್ ಟ್ರೆಂಡ್ನಲ್ಲಿರುವ ಮೈಕ್ರೋ ವೆಬ್ ಸಿರೀಸ್‌ನಲ್ಲಿ. ಈ ಕುರಿತು ವೈಷ್ಣವಿ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾಹಿತಿ ನೀಡಿದ್ದಾರೆ.
