ಉದಯವಾಹಿನಿ, ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡದಿಯಲ್ಲಿ ಮಾಡುತ್ತಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಯೋಜನೆಯನ್ನು ಕೈ ಬಿಡುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು. ಬೆಂಗಳೂರಿನ ಜೆ.ಪಿ. ಭವನದ ಜೆಡಿಎಸ್ ಪಕ್ಷದ ರಾಜ್ಯ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಾಳೆಯಿಂದ ಬೃಹತ್ ಹೋರಾಟ ಮಾಡುತ್ತೇವೆ. ಈ ಯೋಜನೆ ಕೈಬಿಡುವವರೆಗೂ, ರೈತರ ಬೆನ್ನೆಲುಬು ಆಗಿ ನಿಲ್ಲುತ್ತೇವೆ. ಇದು ಯಾವ ಹಂತಕ್ಕೆ ಹೋಗಲಿ. ನಾವು ಇರುತ್ತೇವೆ ಎಂದು ಹೇಳಿದರು.
ಯಾವ ಕಾರಣಕ್ಕೂ ಜೆಡಿಎಸ್ ಪಕ್ಷ ರೈತರ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. ಈ ವಿಚಾರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಈ ಯೋಜನೆಯನ್ನು ಕೈ ಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕೊನೆಯ ಹಂತದವರೆಗೂ ರೈತರ ಧ್ವನಿಯಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.
ಕಳೆದ ಹಲವಾರು ತಿಂಗಳಿಂದ ಬಿಡದಿ ಭಾಗದ ರೈತರು ತಮ್ಮ ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರ ರೈತರಿಗೆ ವಿಶ್ವಾಸಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ ಅವರಲ್ಲಿ ಆಕ್ರೋಶ ಹೆಚ್ಚು ಮಾಡೋ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಜಿಬಿಡಿಎ ಅಧಿಕಾರಿಗಳು, ಪೊಲೀಸರು ರೈತರ ಬಳಿ ಹೋಗುತ್ತಿದಾರೆ. ಈ ವಿಚಾರದಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಿಡಿಕಾರಿದರು.
ಬಹಳ ದಿನಗಳಿಂದ ರೈತರ ಜಮೀನು ಕಸಿದುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದನ್ನು ಖಂಡಿಸಿ ರೈತರು ಹೋರಾಟ ಮಾಡ್ತಿದ್ದಾರೆ. ನಾಳೆ ಜೆಡಿಎಸ್ ಪಕ್ಷ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ನಡೆಸುತ್ತದೆ ಎಂದು ಹೇಳಿದರು.
ರೈತರ ವಿಚಾರದಲ್ಲಿ ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಸಹ ಇದೇ ರೀತಿ ಇತ್ತು. ಅಲ್ಲಿ ರೈತರು ಒಂದು ಸಾವಿರ ದಿನಗಳ ಕಾಲ ಹೋರಾಟ ಮಾಡಿದ್ದಾರೆ. ಅದೇ ರೀತಿ ಜೆಡಿಎಸ್, ಸರ್ಕಾರ ವಿರುದ್ಧ ಹೋರಾಟ ನಡೆಸಲಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಜೆಡಿಎಸ್ ಹೋಗುತ್ತದೆ ಎಂದು ಇದೇ ವೇಳೆ ತಿಳಿಸಿದರು. ಇನ್ನು ಪ್ರತಿಭಟನೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ. ನಮ್ಮ ಜತೆ ರೈತ ಹೋರಾಟಗಾರು ಇರುತ್ತಾರೆ. ಸಾಕಷ್ಟು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡಿದೆ. ಅದನ್ನ ನಿಮ್ಮ ಮುಂದೆ ಇಡುತ್ತೇವೆ ಎಂದರು.
