ಉದಯವಾಹಿನಿ, ಲಕ್ನೋ: ‘ಐ ಲವ್ ಮುಹಮ್ಮದ್’ ಪೋಸ್ಟರ್‌ಗಳ ಮೇಲಿನ ಆಡಳಿತಾತ್ಮಕ ಕ್ರಮವನ್ನು ವಿರೋಧಿಸಿ ಶುಕ್ರವಾರದ ಪ್ರಾರ್ಥನೆಯ ನಂತರ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮೌಲಾನಾ ತೌಕೀರ್ ರಝಾ ಖಾನ್ ಸೇರಿದಂತೆ ಐವತ್ತು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಹಿಂಸಾಚಾರಕ್ಕೆ ಐದು ದಿನ ಮೊದಲೇ ಸಂಚು ನಡೆದಿತ್ತು ಎಂದು ಪೊಲೀಸರ ಆರಂಭಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪಿತೂರಿಯಲ್ಲಿ ಭಾಗಿಯಾಗಿರುವ ಎಲ್ಲಾ ವ್ಯಕ್ತಿಗಳನ್ನು ಗುರುತಿಸಿರುವ ಪೊಲೀಸರು, ಗಲಭೆಕೋರರು ಮತ್ತು ಅಶಾಂತಿಯಲ್ಲಿ ಭಾಗಿಯಾಗಿರುವ ಸಂಘಟಕರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಹೆಚ್ಚುವರಿಯಾಗಿ ಎಲ್ಲಾ ಶಂಕಿತರ ಕರೆ ವಿವರ ದಾಖಲೆಗಳ ಪರಿಶೀಲನೆಗೆ ಮುಂದಾದ ಪೊಲೀಸರು, ಘರ್ಷಣೆಗಳು ನಡೆದ ಪ್ರದೇಶಗಳಿಂದ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗಲಭೆಕೋರರನ್ನು ಗುರುತಿಸುತ್ತಿದ್ದಾರೆ. ಅಲ್ಲದೇ ನಗರದ ಮೂರರಿಂದ ನಾಲ್ಕು ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.
