ಉದಯವಾಹಿನಿ , ಮಾನವನ ದೇಹದಲ್ಲಿ ಉಸಿರಿನ ಜೀವಾಳವೆಂದೇ ಪರಿಗಣಿಸಲ್ಪಡುವ ಪ್ರಮುಖ ಅಂಗ ಶ್ವಾಸಕೋಶ . ಶ್ವಾಸಕೋಶ ಕಾರ್ಯನಿರ್ವಹಣೆ ನಿಂತ ಕ್ಷಣದಿಂದಲೇ ಮನುಷ್ಯನ ಜೀವನವೂ ಅಂತ್ಯವಾಗುತ್ತದೆ ಎನ್ನುವುದು ಅತಿಶಯೋಕ್ತಿ ಅಲ್ಲ. ಹೀಗಾಗಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯ. ನಾವು ಸೇವಿಸುವ ಆಹಾರ ಪದಾರ್ಥಗಳು ಅನುಸರಿಸುವ ಜೀವನಶೈಲಿ ಮತ್ತು ದೈನಂದಿನ ದೈಹಿಕ ಚಟುವಟಿಕೆಗಳು ಶ್ವಾಸಕೋಶದ ಆರೋಗ್ಯದ ಮೇಲೆ ನೇರ ಪ್ರಭಾವ ಬೀರುತ್ತವೆ.

ವಿಶೇಷವಾಗಿ ಉಸಿರಾಟಕ್ಕೆ ಸಂಬಂಧಿಸಿದ ಯೋಗಾಸನಗಳನ್ನು ಪ್ರತಿದಿನ ಅಭ್ಯಾಸ ಮಾಡಿದರೆ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾಗುತ್ತದೆ. ಜೊತೆಗೆ ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಆಹಾರ ಕ್ರಮವನ್ನು ಅನುಸರಿಸುವುದು ಸಹ ಬಹಳ ಮುಖ್ಯ. ಚಳಿಗಾಲದಲ್ಲಿ ಶೀತ, ಕೆಮ್ಮು, ಉಸಿರಾಟದ ತೊಂದರೆಗಳಂತಹ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಇಂತಹ ಸಂದರ್ಭದಲ್ಲಿ ಶ್ವಾಸಕೋಶವನ್ನು ಬಲಪಡಿಸುವ ಆಹಾರಗಳನ್ನು ಸೇವಿಸುವುದು ಅಗತ್ಯ. ಅದರಲ್ಲೂ ಕೋವಿಡ್-19 ಸೋಂಕಿನ ಹಾವಳಿಯ ಬಳಿಕ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ, ಇಂದಿನ ದಿನಗಳಲ್ಲಿ ಅದರ ಆರೈಕೆ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಅದರಲ್ಲೂ ಚಳಿಗಾಲದಲ್ಲಿ ಶ್ವಾಸಕೋಶದ ಆರೋಗ್ಯವನ್ನು ರಕ್ಷಿಸುವ ಆಹಾರಗಳ ಸೇವಿಸುವುದು ಬಹಳ ಅತ್ಯಗತ್ಯವಾಗಿದ್ದು, ಶ್ವಾಸಕೋಶವನ್ನು ಹೆಲ್ಡಿ ಆಗಿ ಇಡಲು ನೆರವಾಗುವ ಹಣ್ಣುಗಳ ಬಗ್ಗೆ ನಾವಿಂದು ನಿಮಗೆ ಹೇಳಿದ್ದೇವೆ.
ಪೇರಳೆ: ಶ್ವಾಸಕೋಶದ ಆರೋಗ್ಯ ಕಾಪಾಡುವಲ್ಲಿ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತವೆ. ಚಳಿಗಾಲದಲ್ಲಿ ಸುಲಭವಾಗಿ ಲಭ್ಯವಾಗುವ ಪೇರಳೆ ಹಣ್ಣು ಇದಕ್ಕೆ ಉತ್ತಮ ಉದಾಹರಣೆ. ಸ್ವಲ್ಪ ಹುಳಿ ಹಾಗೂ ಸಿಹಿ ರುಚಿಯುಳ್ಳ ಈ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್, ವಿಟಮಿನ್ ಸಿ, ಪೊಟಾಶಿಯಂ ಮತ್ತು ನಾರಿನಾಂಶ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಕಿತ್ತಳೆ: ಕಿತ್ತಳೆ ಸೇರಿದಂತೆ ಸಿಟ್ರಸ್ ವರ್ಗದ ಹಣ್ಣುಗಳು ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಪ್ರಮುಖವಾಗಿವೆ. ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ ಹಣ್ಣು ದೇಹದಲ್ಲಿನ ಸೋಂಕುಗಳನ್ನು ದೂರ ಮಾಡುವುದರ ಜೊತೆಗೆ ಕ್ಷಣಾರ್ಧದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ನಿಯಮಿತವಾಗಿ ಕಿತ್ತಳೆ ಹಣ್ಣನ್ನು ಆಹಾರದಲ್ಲಿ ಸೇರಿಸುವುದು ಉತ್ತಮ.

ಸ್ಟ್ರಾಬೆರಿ

ಸ್ಟ್ರಾಬೆರಿ ಸಣ್ಣ ಹಣ್ಣಾಗಿದ್ದರೂ ಪೌಷ್ಟಿಕಾಂಶಗಳ ಭಂಡಾರವೇ ಆಗಿದೆ. ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಈ ಹಣ್ಣಿನಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇಲ್ಲ. ಹೀಗಾಗಿ ಶ್ವಾಸಕೋಶದ ಆರೋಗ್ಯ ಕಾಪಾಡಲು ಇದು ಸಹಕಾರಿ.

ಕಿವಿ ಹಣ್ಣು

ಕಿವಿ ಹಣ್ಣು ಕೂಡ ಔಷಧೀಯ ಗುಣಗಳಿಂದ ಕೂಡಿದ್ದು, ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಲವಾರು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದೈನಂದಿನ ಅಗತ್ಯಕ್ಕೆ ಬೇಕಾದಷ್ಟು ವಿಟಮಿನ್ ಸಿಯನ್ನು ಕಿವಿ ಹಣ್ಣು ಒದಗಿಸುತ್ತದೆ.

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು ಪೋಷಕಾಂಶಗಳ ಆಗರವಾಗಿದ್ದು, ವೈರಲ್ ಸೋಂಕುಗಳನ್ನು ತಡೆಯುವಲ್ಲಿ ಸಹಕಾರಿ. ವಿಟಮಿನ್ ಸಿ, ಪೊಟಾಶಿಯಂ ಮತ್ತು ನಾರಿನಾಂಶಗಳಿಂದ ಸಮೃದ್ಧವಾದ ದಾಳಿಂಬೆ ದೇಹದ ಒಟ್ಟಾರೆ ಆರೋಗ್ಯವನ್ನು ಬಲಪಡಿಸುತ್ತದೆ.

ದ್ರಾಕ್ಷಿ

ಇನ್ನು ದ್ರಾಕ್ಷಿಯನ್ನು ಹಣ್ಣುಗಳ ರಾಣಿ ಎಂದು ಕರೆಯಲಾಗುತ್ತದೆ. ಹಸಿರು, ಕೆಂಪು ಹಾಗೂ ನೇರಳೆ ಬಣ್ಣಗಳಲ್ಲಿ ಲಭ್ಯವಾಗುವ ದ್ರಾಕ್ಷಿಯಲ್ಲಿ ವಿಟಮಿನ್ ಕೆ, ಪೊಟಾಶಿಯಂ, ಮ್ಯಾಂಗನೀಸ್ ಹಾಗೂ ನಾರಿನಾಂಶ ಸಮೃದ್ಧವಾಗಿದೆ. ಇದು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಒಟ್ಟಾರೆ, ಚಳಿಗಾಲದಲ್ಲಿ ಈ ಹಣ್ಣುಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

Leave a Reply

Your email address will not be published. Required fields are marked *

error: Content is protected !!