ಉದಯವಾಹಿನಿ, ದಿನದಲ್ಲಿ ವಾತಾವರಣ ಹಾಗೂ ನಾವು ಸೇವಿಸುವ ಆಹಾರದ ಮೇಲೆ ಚರ್ಮ ರೋಗದ ಸಮಸ್ಯೆಗಳು ಅನೇಕರನ್ನು ಕಾಡುತ್ತಲೇ ಇರುತ್ತದೆ. ಸೇವಿಸುವ ಆಹಾರ, ಬಳಕೆ ಮಾಡುವ ವಸ್ತು ಎಲ್ಲದರ ಮೇಲೆ ಎಷ್ಟು ನಿಗಾವಹಿಸಿದರೂ ಕಡಿಮೆಯೇ. ಚರ್ಮ ಸಂಬಂಧಿತ ಸೋಂಕು ಬರಬಾರದು ಎಂಬ ಕಾರಣಕ್ಕೆ ಅನೇಕರು ಬಿಸಿ ನೀರಿನಲ್ಲಿ ಸ್ನಾನ ಮಾಡುತ್ತಾರೆ. ಆದರೆ ಈ ಬಿಸಿ ನೀರಿನ ಸ್ನಾನ ನಿಜಕ್ಕೂ ಚರ್ಮದ ಆರೈಕೆ ಮಾಡುತ್ತದಾ? ಅಥವಾ ಚರ್ಮಕ್ಕೆ ಇದರಿಂದಾಗಿ ಏನಾದರು ಹಾನಿಯಾಗಬಹುದಾ? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಬಿಸಿ ನೀರಿನ ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆ ಎದುರಾಗುತ್ತದೆ. ಚರ್ಮದ ಸೋಂಕು ಕ್ಯಾನ್ಸರ್‌ಗೂ ಕಾರಣವಾಗಬಹುದು. ಬೇಗ ವಯಸ್ಸಾಗುವಿಕೆ ಸಮಸ್ಯೆ ಕೂಡ ಬರಬಹುದು ಎಂದು ಇತ್ತೀಚಿನ ವೈದ್ಯಕೀಯ ಅಧ್ಯಯನ ತಂಡದ ವರದಿಯ ಮೂಲಕ ತಿಳಿದು ಬಂದಿದೆ.
ಬಹುತೇಕರ ಬೆಳಗ್ಗೆ ಆರಂಭ ಆಗುವುದೇ ಬೆಳಗ್ಗಿನ ಬಿಸಿ ನೀರಿನ ಸ್ನಾನದ ಮೂಲಕ ಎನ್ನಬಹುದು. ಕೆಲವರು ಬಿಸಿ ನೀರಿನ ಸ್ನಾನದಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸದೆ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ತಮ್ಮಷ್ಟಕ್ಕೆ ತಾವೇ ನಿರ್ಧಾರ ಕೈಗೊಳ್ಳುತ್ತಾರೆ. ಆದರೆ ನಾವು ಮಾಡುವ ಸಾಮಾನ್ಯ ತಪ್ಪುಗಳಿಂದ ಚರ್ಮದ ನೈಸರ್ಗಿಕ ಅಂಶಗಳಿಗೆ ಹಾನಿಯನ್ನುಂಟು ಮಾಡಬಹುದು. ಇದು ಸೋಂಕುಗಳಿಗೂ ಕಾರಣವಾಗಿ ಅಕಾಲಿಕ ವಯಸ್ಸಾಗುವಿಕೆ, ಚರ್ಮದ ಕ್ಯಾನ್ಸರ್‌ಗೆ ಗುರಿ ಯಾಗುವಂತೆ ಮಾಡುತ್ತದೆ ಎಂದು ಚರ್ಮರೋಗ ತಜ್ಞರು ಈ ಬಗ್ಗೆ ತಿಳಿಸಿದ್ದಾರೆ. ಚರ್ಮರೋಗ ತಜ್ಞರ ಪ್ರಕಾರ ಅತಿಯಾಗಿ ಬಿಸಿ ನೀರು ಬಳಸುವುದು ಅಷ್ಟೊಂದು ಸೂಕ್ತ ಅಲ್ಲ. ತುಂಬಾ ಶಾಖ ಹೊಂದಿರುವ ಬಿಸಿನೀರು ಬಳಕೆ ಮಾಡುವುದರಿಂದ ಚರ್ಮದ ನೈಸರ್ಗಿಕ ಪೋಷಕಾಂಶ ಕಳೆಗುಂದಲಿದೆ. ಚರ್ಮವು ಇದರಿಂದ ಒಣಗುತ್ತದೆ ಮತ್ತು ದುರ್ಬಲಗೊಳ್ಳುತ್ತದೆ. ಹೀಗಾಗಿ ಚರ್ಮಕ್ಕೆ ಮಾಲಿನ್ಯಕಾರಕ ಸೋಂಕು, ತುರಿಕೆ, ಅಲರ್ಜಿ ಇತ್ಯಾದಿ ಸಮಸ್ಯೆ ಉಂಟಾಗಲಿದೆ.
