ಉದಯವಾಹಿನಿ,ಬೆಂಗಳೂರು:  ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವುದಾಗಿ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಯನ್ನು ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಖಂಡಿಸಿದ್ದು, ಯೋಜನೆಯನ್ನು ವಿರೋಧಿಸುವುದಾಗಿ ತಿಳಿಸಿದೆ. ಇದೀಗ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, ತಮಿಳುನಾಡಿನ ನಮ್ಮ ಸಹೋದರರ ಮೇಲೆ ಯಾವುದೇ ಕೋಪವಾಗಲೀ, ದ್ವೇಷವಾಗಲೀ ಇಲ್ಲ ಎಂದಿದ್ದಾರೆ. ಇಂದು ಸರಣಿ ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮೇಕೆದಾಟು ಯೋಜನೆಗೆ ಹಿಂದಿನ ಸರ್ಕಾರ ಒಂದು ಸಾವಿರ ಕೋಟಿ ರೂ. ಘೋಷಿಸಿದೆ. ಆದರೆ, ಖರ್ಚು ಮಾಡಿಲ್ಲ. ಮೇಕೆದಾಟು ಯೋಜನೆಯನ್ನು ಸಾಕಾರಗೊಳಿಸಲು ಆ ಹಣ ಬಳಕೆಯಾಗಲಿದೆ. ತಮಿಳುನಾಡಿನ ನಮ್ಮ ಸಹೋದರರ ಮೇಲೆ ಕೋಪವಾಗಲೀ, ದ್ವೇಷವಾಗಲೀ ಇಲ್ಲ. ಅವರೂ ನಮ್ಮ ಅಣ್ಣತಮ್ಮಂದಿರಂತೆ ಎಂದಿದ್ದಾರೆ.

ಕರ್ನಾಟಕದಲ್ಲಿ ನೆಲೆಸಿರುವ ತಮಿಳಿಗರು ಹಾಗೂ ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರು ಕಾವೇರಿ ನೀರು ಕುಡಿಯುತ್ತಿದ್ದಾರೆ. ಕೋರ್ಟು, ಕಚೇರಿ ಅಲೆದದ್ದು ಸಾಕು. ಮೇಕೆದಾಟು ಯೋಜನೆಯಿಂದ ಎರಡೂ ರಾಜ್ಯಗಳಿಗೂ ಅನುಕೂಲವಾಗಲಿದೆ. ಕಾವೇರಿ ಪಾತ್ರದಲ್ಲಿರುವ ರೈತರಿಗೆ ನೀರಾವರಿ ಹಾಗೂ ಶ್ರೀಸಾಮಾನ್ಯರಿಗೆ ಕುಡಿಯುವ ನೀರು ಎರಡೂ ಲಭಿಸಲಿದೆ ಎಂದು ತಿಳಿಸಿದ್ದಾರೆ. ನಾನು ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ. ಅಕ್ಕಪಕ್ಕದ ರಾಜ್ಯದವರು ಅಣ್ಣ ತಮ್ಮಂದಿರಂತೆ ಬದುಕೋಣ. ನಿಮ್ಮಲ್ಲಿ ಹೃದಯ ಶ್ರೀಮಂತಿಕೆ ಇದೆ. ನಮ್ಮಲ್ಲೂ ಹೃದಯ ಶ್ರೀಮಂತಿಕೆ ಇದೆ. ಒಬ್ಬರಿಗೊಬ್ಬರು ಸಹಕರಿಸುತ್ತಾ ಜೊತೆಯಾಗಿ ಸಾಗೋಣ ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!