ಉದಯವಾಹಿನಿ, ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಹೀನಾಯವಾಗಿ ಸೋಲಿಸಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್​ ಪಟ್ಟದೊಂದಿಗೆ ಭಾರತ ತಂಡ ಪಾಕಿಸ್ತಾನ್ ವಿರುದ್ಧ ಪಾರುಪತ್ಯವನ್ನು ಮುಂದುವರೆಸಿದೆ. ಅತ್ತ ಮೂರನೇ ಬಾರಿ ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿದ್ದ ಪಾಕ್ ತಂಡ ಹ್ಯಾಟ್ರಿಕ್ ಸೋಲಿನ ರುಚಿ ನೋಡಿದ್ದಾರೆ. ಅಂದರೆ ಈ ಬಾರಿಯ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ 7 ವಿಕೆಟ್​ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಸುತ್ತಿನಲ್ಲಿ 6 ವಿಕೆಟ್​ಗಳಿಂದ ಪಾಕ್ ಪಡೆಗೆ ಸೋಲುಣಿಸಿದ್ದರು. ಇದೀಗ ಫೈನಲ್ ಪಂದ್ಯದಲ್ಲೂ ಪಾಕಿಸ್ತಾನ್ ವಿರುದ್ಧ ಟೀಮ್ ಇಂಡಿಯಾ ಪರಾಕ್ರಮ ಮೆರೆದಿದ್ದಾರೆ.
ಈ ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪ್ರತಿನಿಧಿ ಅಮೀನುಲ್ ಇಸ್ಲಾಂ ಅವರಿಂದ ರನ್ನರ್ ಅಪ್ ಚೆಕ್ ಪಡೆದ ಪಾಕಿಸ್ತಾನ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಹತಾಶೆಯಿಂದ ಅದನ್ನು ಎಸೆದರು. ಇತ್ತ ಪಾಕ್ ನಾಯಕನ ನಡೆಯನ್ನು ಪ್ರೇಕ್ಷಕರು ಅಪಹಾಸ್ಯ ಮಾಡುತ್ತಿರುವ ಶಬ್ದ ಕೂಡ ವಿಡಿಯೋದಲ್ಲಿ ಕೇಳಿಸುತ್ತದೆ. ಇದೀಗ ಪಾಕ್ ತಂಡದ ನಾಯಕನ ಹತಾಶೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್​ಗಳಲ್ಲಿ 146 ರನ್ ಗಳಿಸಿ ಆಲೌಟ್ ಆಗಿದ್ದರು. ಈ ಗುರಿಯನ್ನು ಟೀಮ್ ಇಂಡಿಯಾ 19.4 ಓವರ್​ಗಳಲ್ಲಿ ಚೇಸ್ ಮಾಡಿ 5 ವಿಕೆಟ್​ಗಳ ಜಯ ಸಾಧಿಸಿದೆ. ಈ ಮೂಲಕ ಪಾಕಿಸ್ತಾನ್ ವಿರುದ್ಧ ಮೂರನೇ ಬಾರಿ ಫೈನಲ್ ಪಂದ್ಯದಲ್ಲಿ ಗೆಲುವು ದಾಖಲಿಸಿದ ಸಾಧನೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!