ಉದಯವಾಹಿನಿ, ಅಹಮದಾಬಾದ್: ಭಾರತೀಯ ಸ್ಪಿನ್ನರ್‌ಗಳ ಮೋಡಿ, ರವೀಂದ್ರ ಜಡೇಜಾ ಅವರ ಆಲ್‌ರೌಂಡ್‌ ಪ್ರದರ್ಶನಕ್ಕೆ ಪತರುಗುಟ್ಟಿದ ವೆಸ್ಟ್‌ ಇಂಡೀಸ್‌ ತಂಡ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 146 ರನ್‌ಗಳಿಗೆ ಆಲೌಟ್‌ ಆಗಿದೆ. ಪರಿಣಾಮ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಇನ್ನೂ ಒಂದು ಇನ್ನಿಂಗ್ಸ್‌ ಬಾಕಿ ಇರುವಂತೆ 140 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನದ ಅಂತ್ಯಕ್ಕೆ 448 ರನ್‌ ಗಳಿಸಿದ್ದ ಭಾರತ 286 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. 3ನೇ ದಿನ ಡಿಕ್ಲೇರ್‌ ಘೋಷಿಸುತ್ತಿದ್ದಂತೆ ಕಣಕ್ಕಿಳಿದ ವಿಂಡೀಸ್‌ 2ನೇ ಇನ್ನಿಂಗ್ಸ್‌ನಲ್ಲೂ ಭಾರತದ ಸ್ಪಿನ್ನರ್‌ಗಳ ದಾಳಿಗೆ ಪತರುಗುಟ್ಟಿತು. ಅಲಿಕ್ ಅಥನಾಜೆ 38 ರನ್‌, ಜಸ್ಟಿನ್ ಗ್ರೀವ್ಸ್ 25 ರನ್‌ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಅಲ್ಪಮೊತ್ತಕ್ಕೆ ನೆಲ ಕಚ್ಚಿದರು. ಹೀಗಾಗಿ ಮೂರನೇ ದಿನವೇ ಭಾರತ ಗೆಲುವು ಸಾಧಿಸಿತು.
2ನೇ ಇನ್ನಿಂಗ್ಸ್‌ನಲ್ಲಿ ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್‌ ಕಿತ್ತರೆ, ಸಿರಾಜ್‌ 3 ವಿಕೆಟ್‌, ಕುಲ್‌ದೀಪ್‌ ಯಾದವ್‌ 2 ವಿಕೆಟ್‌, ವಾಷಿಂಗ್ಟನ್‌ ಸುಂದರ್‌ 1 ವಿಕೆಟ್‌ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಮೊದಲ ದಿನ 2 ವಿಕೆಟ್‌ ನಷ್ಟಕ್ಕೆ 121 ರನ್‌ ಗಳಿಸಿದ್ದ ಭಾರತ 2ನೇ ದಿನ 327 ರನ್‌ ಕಲೆ ಹಾಕಿತ್ತು. 2ನೇ ದಿನದ ಅಂತ್ಯಕ್ಕೆ 128 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 448 ರನ್‌ ಗಳಿಸಿತ್ತು. ಮೊದಲ ದಿನ 18 ರನ್‌ಗಳಿಸಿದ್ದ ನಾಯಕ ಶುಭಮನ್‌ ಗಿಲ್‌ 2ನೇ ದಿನ 50 ರನ್‌ ಹೊಡೆದರೆ ಕೆಎಲ್‌ ರಾಹುಲ್‌ 197 ಎಸೆತಗಳಲ್ಲಿ 12 ಬೌಂಡರಿಗಳ ನೆರವಿನಿಂದ ಶತಕ ಸಿಡಿಸಿ ಔಟಾದರು. ಧ್ರುವ್ ಜುರೆಲ್ 210 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್‌ ಸಿಡಿಸಿ 125 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ಧ್ರುವ್ ಜುರೆಲ್ ಮತ್ತು ಜಡೇಜಾ 5ನೇ ವಿಕೆಟಿಗೆ 331 ಎಸೆತಗಳಲ್ಲಿ 206 ರನ್‌ ಜೊತೆಯಾಟವಾಡಿದ್ದರಿಂದ ಭಾರತ ಬೃಹತ್‌ ಮುನ್ನಡೆ ಸಾಧಿಸಿತು.
ರವೀಂದ್ರ ಜಡೇಜಾ ಔಟಾಗದೇ 104 ರನ್‌ (176 ಎಸೆತ, 6 ಬೌಂಡರಿ, 5 ಸಿಕ್ಸ್‌) ಸಿಡಿಸಿದರೆ ವಾಷಿಂಗ್ಟನ್‌ ಸುಂದರ್‌ 9 ರನ್‌ಗಳಿಸಿ ಅಜೇಯರಾಗಿ ಉಳಿದಿದ್ದರು.

Leave a Reply

Your email address will not be published. Required fields are marked *

error: Content is protected !!