ಉದಯವಾಹಿನಿ, ಬೆಂಗಳೂರು: ಯಾವುದೇ ಶಕ್ತಿ ವೀರಶೈವ-ಲಿಂಗಾಯತರನ್ನ ಬೇರ್ಪಡಿಸಲು ಸಾಧ್ಯವಿಲ್ಲ. ʻವೀರಶೈವ ಲಿಂಗಾಯತರು ಹಾಳಾದ್ರೆ ಇಡೀ ರಾಜ್ಯವೇ ಹಾಳಾಗುತ್ತೆ, ಅವರು ಸುಧಾರಿಸಿದ್ರೆ, ಕರ್ನಾಟಕ ಉದ್ಧಾರ ಆಗುತ್ತೆʼ ಅಂತ ಸಾಹಿತಿಯೊಬ್ಬರು ಹೇಳ್ತಾರೆ. ಎಲ್ಲರ ಉದ್ಧಾರ ಆಗಬೇಕಾದ್ರೆ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿರುವುದು ಅತ್ಯವಶ್ಯಕವಾಗಿದೆ. ಯಾರಾದ್ರೂ ಈ ಧರ್ಮವನ್ನ ಹಾಳು ಮಾಡಲು ಪ್ರಯತ್ನಿಸಿದ್ರೆ, ಇಡೀ ಕರ್ನಾಟಕವೇ ಹಾಳಾಗುತ್ತೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು ಎಂಬ ಸಚಿವ ಎಂ.ಬಿ ಪಾಟೀಲ್ ಹೇಳಿಕೆಗೆ ಪ್ರತಕ್ರಿಯಿಸಿದ್ದಾರೆ. ಎಂ.ಬಿ.ಪಾಟೀಲ್ ನನಗೆ ಸ್ನೇಹಿತರು ಅವರ ಬಗ್ಗೆ ಮಾತನಾಡಲ್ಲ. ಯಾರಿಂದಲೂ ವೀರಶೈವ ಲಿಂಗಾಯತ ಬೇರೆ ಮಾಡಲು ಸಾಧ್ಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದಲೇ ಇದೀವಿ. ಅಲ್ಲದೇ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಸಿದ್ದರಾಮಯ್ಯ ಹೆಸರನ್ನ ತಳಕು ಹಾಕಬಾರದು. ಈ ಹಿಂದೆಯೂ ಅವರಿಗೆ ಸಂಬಂಧ ಇರಲಿಲ್ಲ, ಈಗಲೂ ಇಲ್ಲ, ನಮ್ಮ ಸರ್ಕಾರಕ್ಕೂ ಇಲ್ಲ. ವೀರಶೈವ ಲಿಂಗಾಯತ ಮಹಾಸಭಾ ನಿರ್ಣಯವೇ ಅಂತಿಮ ಎಂದು ಹೇಳಿದ್ದಾರೆ. ನಮ್ಮ ನಿಲುವು ಸ್ಪಷ್ಟವಾಗಿ ಹೇಳಿದ್ದೇನೆ. ಲಿಂಗಾಯತ-ವೀರಶೈವ ಎರಡೂ ಒಂದೇ. ಶಿವಕುಮಾರ ಸ್ವಾಮಿಗಳು, ಅಖಿಲ ಭಾರತ ವೀರಶೈವ ಲಿಂಗಾಯತ ಸಭೆಯ ಎಲ್ಲಾ ಅಧ್ಯಕ್ಷರು ಇವತ್ತು ವೀರಶೈವ-ಲಿಂಗಾಯತ ಎರಡು ಸಮಾನಾರ್ಥಕ ಪದಗಳು ಇವೆ ಅಂತ ಹೇಳಿದ್ದಾರೆ. ವೀರಶೈವ-ಲಿಂಗಾಯತ ಭಿನ್ನ ಇಲ್ಲ ಎಂದಿದ್ದಾರೆ.
