ಉದಯವಾಹಿನಿ,ತಮಿಳುನಾಡು: ತಮಿಳುನಾಡಿನ ಅಣ್ಣಾಪಾಳ್ಯಂನ ರೈಲ್ವೆ ಮಾರ್ಗದ ರೈಲ್ವೆ ಹಳಿ ಮೇಲೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇಬ್ಬರು ಯುವಕರು ರೈಲ್ವೆ ಹಳಿ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ. ರೈಲಿನ ರಭಸಕ್ಕೆ ಸಿಲುಕಿದ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಪಾಂಡಿಯನ್ ಮತ್ತು ವಿಜಯ್ ಎಂದು ಗುರುತಿಸಲಾಗಿದ್ದು, ತಮಿಳುನಾಡಿನ ರಂಗನಾಥ ಪುರಂನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಪಫಾತ ನಡೆದ ಸ್ಥಳಕ್ಕೆ ರೈಲ್ವೆ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಕೂಡಲೇ ಆಗಮಿಸಿದ್ದಾರೆ. ಪಾಂಡಿಯನ್ ಮತ್ತು ವಿಜಯ್ ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಹೆಚ್ಚುವರಿ ವಿವರಗಳನ್ನು ಸಂಗ್ರಹಿಸಲು ಮತ್ತು ಅಪಘಾತಕ್ಕೆ ಕಾರಣವಾದ ಸಂದರ್ಭಗಳ ಮೇಲೆ ಗಮನಹರಿಸಲು ತಮ್ಮ ಇಲಾಖೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
