ಉದಯವಾಹಿನಿ, ಕರ್ನೂಲ್​, ಆಂಧ್ರಪ್ರದೇಶ : ಹೆಚ್ಚಿನ ಹಣ ಗಳಿಸಬಹುದು ಎಂದು ನಂಬಿಸಿ ಹೂಡಿಕೆದಾರರಿಗೆ ₹1,000 ಕೋಟಿಗೂ ಹೆಚ್ಚಿನ ಆರ್ಥಿಕ ವಂಚನೆ ಎಸಗಿರುವ ಘಟನೆ ಕರ್ನೂಲಿನಲ್ಲಿ ನಡೆದಿದೆ. ಅಪರಾಧ ತನಿಖಾ ಇಲಾಖೆಯಿಂದ ತನಿಖೆ ನಡೆಸಲಾಗುತ್ತಿರುವ ಈ ಪ್ರಕರಣವು, ಬಹು ರಾಜ್ಯಗಳಲ್ಲಿ ಸಾವಿರಾರು ಜನರನ್ನು ವಂಚಿಸಿದ ವ್ಯಾಪಕ ನೆಟ್‌ವರ್ಕ್ ಮಾರ್ಕೆಟಿಂಗ್ ಹಗರಣವೊಂದನ್ನು ಬಯಲಿಗೆ ಎಳೆದಿದೆ.

ಹೇಮಂತ್ ಕುಮಾರ್ ರೈ ನೇತೃತ್ವದ ಶ್ರೇಯಾ ಇನ್ಫ್ರಾ ಮತ್ತು ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಈ ವಂಚನೆಯ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರಂಭದಲ್ಲಿ ₹270 ಕೋಟಿಯಿಂದ ₹300 ಕೋಟಿಯವರೆಗೆ ಇರುವುದಾಗಿ ಹೇಳಲಾಗಿತ್ತು. ಆದರೆ, ಈಗ ಹಗರಣದ ಪ್ರಮಾಣ ₹1,000 ಕೋಟಿ ದಾಟಿದೆ ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ.

2024 ರಲ್ಲಿ ನೂರಾರು ಹೂಡಿಕೆದಾರರು ಹಣ ಪಾವತಿಸಿದ ಬಗ್ಗೆ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ ನಂತರ ವಂಚನೆ ಬೆಳಕಿಗೆ ಬಂದಿತ್ತು. ಕಂಪನಿಯು ಹೆಚ್ಚಿನ ಆದಾಯದ ಆಸೆ ತೋರಿಸಿ ವಿವಿಧ ಪ್ರಯೋಜನಗಳ ಬಗ್ಗೆ ಆಶ್ವಾಸೆ ನೀಡಿ ಹೂಡಿಕೆದಾರರನ್ನು ಆಕರ್ಷಿಸಿತ್ತು. ಮಾಸಿಕ ₹12,000 ರೂಗಳನ್ನು 18 ತಿಂಗಳವರೆಗೆ ಹೂಡಿಕೆ ಮಾಡಿದರೆ ಹಣ ದ್ವಿಗುಣಗೊಳ್ಳಲಿದೆ ಎಂದು ನಂಬಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಚಿನ್ನದ ಮೇಲಿನ ಹೂಡಿಕೆ, ವಾಹನಗಳ ಖರೀದಿಗಾಗಿ ಹೂಡಿಕೆ ಮಾಡಿದರೆ, ಕಡಿಮೆ ಅವಧಿಯಲ್ಲಿ ಭಾರಿ ಲಾಭದ ಕೊಡುಗೆಗಳನ್ನು ನೀಡುವುದರೊಂದಿಗೆ ಜನರನ್ನು ಆಕರ್ಷಿಸಿದ್ದವು. ಆಂಧ್ರಪ್ರದೇಶದ ಜಿಲ್ಲೆಗಳಾದ ಶ್ರೀಕಾಕುಳಂ, ವಿಜಯನಗರಂ ಮತ್ತು ವಿಶಾಖಪಟ್ಟಣಂಗಳಲ್ಲಿ ಕಂಪನಿ ಕಾರ್ಯನಿರ್ವಹಿಸುತ್ತಿದ್ದು, ತೆಲಂಗಾಣ, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಬಿಹಾರ ಮತ್ತು ಅಸ್ಸಾಂ ಸೇರಿದಂತೆ ಇತರ ರಾಜ್ಯಗಳಿಗೆ ವಿಸ್ತರಿಸಿರುವ ಈ ಕಂಪನಿಯು ದೇಶಾದ್ಯಂತ 30,000ಕ್ಕೂ ಹೆಚ್ಚು ಸದಸ್ಯರ ವಿಶಾಲ ಜಾಲವನ್ನು ಹೊಂದಿದೆ.

ಯಶಸ್ಸು ಮತ್ತು ನ್ಯಾಯಸಮ್ಮತತೆಯ ಭ್ರಮೆ ಸೃಷ್ಟಿಸಲು ಶೀರ್ಷಿಕೆಗಳು, ಪ್ರೋತ್ಸಾಹಕಗಳು ಮತ್ತು ಕಾರುಗಳಂತಹ ಐಷಾರಾಮಿ ಬಹುಮಾನಗಳನ್ನು ಘೋಷಿಸಲಾಗುತ್ತಿತ್ತು. ಕರ್ನೂಲ್ ಒಂದರಲ್ಲೇ 18,000ಕ್ಕೂ ಹೆಚ್ಚು ಸದಸ್ಯರು ಈ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಹೂಡಿಕೆದಾರರ ವಿಶ್ವಾಸ ಗಳಿಸಲು ಕಂಪನಿಯು ಪರುಮಂಚಲದಲ್ಲಿ 51.55 ಎಕರೆ ಭೂಮಿಯನ್ನು ಖರೀದಿಸಿತ್ತು. ಅದನ್ನು ಒಂದು ಸ್ಪಷ್ಟ ಆಸ್ತಿ ಎಂದು ತೋರಿಸಿತ್ತು. ಅದಾಗ್ಯೂ 2024ರಲ್ಲಿ ಕಂಪನಿಯು ಹಠಾತ್ತನೆ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಇದರಿಂದಾಗಿ ಹೂಡಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದರು.

ಈ ಬಗ್ಗೆ ಸಂತ್ರಸ್ತರು ಸ್ಥಳೀಯ ಪ್ರತಿನಿಧಿಗಳನ್ನು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅವರು, ಒಂದು ವೇಳೆ ನೀವು ಕಾನೂನು ಕ್ರಮಕ್ಕೆ ಮುಂದಾದರೆ ನಿಮಗೆ ಬರಬೇಕಾದ ಹಣ ಸಿಗುವುದಿಲ್ಲ ಎಂದು ಹೆದರಿಸಿ ಅವರಿಗೆ ದೂರು ಸಲ್ಲಿಸದಂತೆ ಎಚ್ಚರಿಸಿದ್ದಾರೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!