ಉದಯವಾಹಿನಿ, ಭಾರತದ ಪ್ರಖ್ಯಾತ ಒಟಿಟಿ ಪ್ಲಾಟ್ ಜೀ 5 ಹಾಗೂ ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪಿಆರ್‌ಕೆ ಪ್ರೊಡಕ್ಷನ್ಸ್ ಸಹಯೋಗದಲ್ಲಿ ‘ಮಾರಿಗಲ್ಲು’ ವೆಬ್ ಸರಣಿಯನ್ನು ಘೋಷಿಸಿದೆ. ಈ ವೆಬ್ ಸೀರೀಸ್ ಇದೇ ತಿಂಗಳ 31ರಿಂದ ಜೀ 5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದಿಗ ಮಾರಿಗಲ್ಲು ವೆಬ್ ಸರಣಿಯ ಟೀಸರ್ ಅನಾವರಣಗೊಂಡಿದೆ. ನಟ ಧನಂಜಯ ನಿರೂಪಣೆಯ ಮೂಲಕ ಶುರುವಾಗುವ ಟೀಸರ್‌ನಲ್ಲಿ, ಕದಂಬ ರಾಜವಂಶದ ಸ್ಥಾಪಕ ಮತ್ತು ಕರ್ನಾಟಕದ ಮೊದಲ ರಾಜ ಮಯೂರ ಶರ್ಮಾ ಪಾತ್ರದಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಂಡಿದ್ದಾರೆ. ಇದು ಅಭಿಮಾನಿಗಳ ಕುತೂಹಲ ಹೆಚ್ಚುವಂತೆ ಮಾಡಿದೆ.
4ನೇ ಶತಮಾನದ ಕದಂಬರ ಆಳ್ವಿಕೆಯ ಕಥೆ ಇದರಲ್ಲಿ ಇರಲಿದೆ. ಕದಂಬರ ಪ್ರಥಮ ರಾಜನಾದ ಮಯೂರ ಶರ್ಮನ ಪರಂಪರೆಯನ್ನು ತಿಳಿಸುತ್ತದೆ. ಕದಂಬರ ಕಾಲದ ನಿಧಿ ಹುಡುಕಲು ಹೊರಟ ಶಿರಸಿ ಹುಡುಗರ ಕಥೆಯನ್ನು ಹೆಣೆಯಲಾಗಿದೆ. ನಂಬಿಕೆ, ಸ್ವಾರ್ಥ, ದುರಾಸೆ ಮುಂತಾದ ಭಾವನೆಗಳಿಗೆ ಒಳಗಾದ ಪಾತ್ರಗಳು ಈ ವೆಬ್ ಸರಣಿಯಲ್ಲಿ ಇರಲಿವೆ. ಅಲ್ಲದೇ ಶಿರಸಿಯ ಪ್ರಖ್ಯಾತ ಬೇಡರ ವೇಷ ವೆಬ್ ಸೀರೀಸ್ ನಲ್ಲಿ ವಿಶೇಷವಾಗಿ ಕಾಣ ಸಿಗುತ್ತದೆ.
ಮಾರಿಗಲ್ಲು ವೆಬ್ ಸೀರೀಸ್ ನಲ್ಲಿ ರಂಗಾಯಣ ರಘು, ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ಪ್ರವೀಣ್ ತೇಜ್ ನಟಿಸಿದ್ದಾರೆ. ಜೊತೆಗೆ ಜೀ ಕನ್ನಡದ ಹಿಟ್ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಮೂಲಕ ಖ್ಯಾತಿ ಗಳಿಸಿರುವ ಎಎಸ್ ಸೂರಜ್, ಬಹುಮುಖ ಪ್ರತಿಭೆ ಪ್ರಶಾಂತ್ ಸಿದ್ದಿ ಮತ್ತು ನಿನಾದ ಹೃತ್ಸಾ ತಾರಾಬಳಗದಲ್ಲಿದ್ದಾರೆ. ಮಾರಿಗಲ್ಲು ವೆಬ್ ಸರಣಿಯನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಿಸಿದ್ದು, ದೇವರಾಜ್ ಪೂಜಾರಿ ಬರೆದು ನಿರ್ದೇಶಿಸಿದ್ದಾರೆ. ಎಸ್.ಕೆ. ರಾವ್ ಛಾಯಾಗ್ರಹಣ, ಎಲ್.ವಿ. ಮುತ್ತು ಮತ್ತು ಎಲ್.ವಿ. ಗಣೇಶ್ ಸಂಗೀತ ನಿರ್ದೇಶನ ಹಾಗೂ ರವಿ ಹಿರೇಮಠ್ ಸೌಂಡ್ ಡಿಸೈನ್ ವೆಬ್ ಸರಣಿಗಿದೆ.
