ಉದಯವಾಹಿನಿ, ಯತೀಶ್ ವೆಂಕಟೇಶ್ ಹಾಗೂ ಗಣೇಶ್ ಪಾಪಣ್ಣ ಸೇರಿ ನಿರ್ಮಿಸುತ್ತಿರುವ, ಡಾ.ಸೂರಿ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹಾಲಯ ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿ ಲೇಔಟ್‌ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮೋಹನ್ ಮಾಯಣ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ದೃಶ್ಯಕ್ಕೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿ, ಚಿತ್ರಕ್ಕೆ ಶುಭ ಕೋರಿದರು.
ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಾಪಕ ಗಣೇಶ್ ಪಾಪಣ್ಣ, ಇದು ನಮ್ಮ ಪರ್ಪಲ್ ರಾಕ್ ಸಂಸ್ಥೆಯ ಐದನೇ ಚಿತ್ರ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಅರ್ಥವಾಗುವಂಥ ವಿಭಿನ್ನ ಕಂಟೆಂಟ್ ಈ ಚಿತ್ರದಲ್ಲಿದೆ. ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸುವ ಯೋಜನೆಯಿದೆ. ರಷ್ಯಾದ ಅರ್ಮೇನಿಯಾದಲ್ಲಿ 7-10 ದಿನಗಳ ದಿನಗಳ ಕಾಲ ಚಿತ್ರೀಕರಣ, ನಂತರ ಬೆಂಗಳೂರು, ಆನಂತರ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಸೇರಿ 40 ರಿಂದ 50 ದಿನಗಳ ಕಾಲ ಚಿತ್ರೀಕರಣ ನಡೆಸಲಿದ್ದೇವೆ. ಈ ಚಿತ್ರಕ್ಕೆ ಕಥೆಯೇ ನಾಯಕ. ಆದರೆ, 20 ಕ್ಕೂ ಹೆಚ್ಚು ಪ್ರಮುಖಪಾತ್ರಗಳಿದ್ದು, ಆ ಪಾತ್ರಗಳಲ್ಲಿ ಜನಪ್ರಿಯ ಕಲಾವಿದರು ಅಭಿನಯಿಸಲಿದ್ದಾರೆ. ಆಡಿಷನ್ ಮೂಲಕವೂ ಕಲಾವಿದರ ಆಯ್ಕೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಈ ಕುರಿತು ಮಾಹಿತಿ ನೀಡುತ್ತೇವೆ. ವಿಭಿನ್ನ ಶೈಲಿಯ ಹಾರರ್, ಥ್ರಿಲ್ಲರ್ ಕಂಟೆಂಟ್ ಚಿತ್ರದಲ್ಲಿದ್ದು, ಪ್ರತಿಪಾತ್ರಕ್ಕೂ ಅದರದೇ ಆದ ಪ್ರಾಮುಖ್ಯತೆಯಿದೆ. ಡಾ.ಸೂರಿ ಅವರು ಕ್ರಿಯೇಟಿವ್ ಹೆಡ್ ಆಗಿ ನಮ್ಮ ಜತೆ ನಿಂತಿದ್ದಾರೆ ಎಂದು ಹೇಳಿದರು.
