ಉದಯವಾಹಿನಿ, ಥಾಣೆ: ಸಾಮಾನ್ಯವಾಗಿ ಯಾವುದೇ ಹುಡುಗ, ಹುಡುಗಿ ಮೊದಲಿಗೆ ಭೇಟಿ ಮಾಡಲು ದೇವಸ್ಥಾನ, ಪಾರ್ಕ್, ಹೊಟೇಲ್ ನೋಡುತ್ತಾರೆ. ಆದರೆ ಇಲ್ಲೊಬ್ಬಳು ಯುವಕನನ್ನು ಬಾರ್ ಗೆ ಕರೆಸಿಕೊಂಡಿದ್ದಾಳೆ ಮಾತ್ರವಲ್ಲ ಮದ್ಯದ ದುಬಾರಿ ಬಿಲ್ ಅನ್ನು ಆತನ ಕೈಗೆ ಒಪ್ಪಿಸಿದ್ದಾಳೆ. ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳಿಂದಾಗಿ ವ್ಯಕ್ತಿಯೊಬ್ಬ ಕೇವಲ ಮದ್ಯಕ್ಕಾಗಿ 24,000 ರೂ. ಖರ್ಚು ಮಾಡಬೇಕಾದ ಪ್ರಸಂಗವೊಂದು ಎದುರಾದ ಘಟನೆ ಥಾಣೆಯಲ್ಲಿ ನಡೆದಿದೆ. ಈ ಕುರಿತು ಆತ ರೆಡ್ಡಿಟ್ ನಲ್ಲಿ ಹೇಳಿಕೊಂಡಿದ್ದು ಭಾರಿ ವೈರಲ್ ಆಗಿದೆ. ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು ಥಾಣೆಯ ಬಾರ್‌ನಲ್ಲಿ ಭೇಟಿಯಾದ ಯುವಕನನ್ನು ವಂಚಿಸಿದ್ದಾಳೆ. ಈ ಕುರಿತು ಯುವಕ ರೆಡ್ಡಿಟ್‌ನಲ್ಲಿ ಹೇಳಿಕೊಂಡಿದ್ದಾನೆ. ಸುಮಾರು ಒಂದು ಗಂಟೆ ಕಾದ ಬಳಿಕ ಥಾಣೆಯ ಉಪ್ವಾನ್ ಸರೋವರದ ಬಳಿ ಯುವತಿಯನ್ನು ಮೊದಲು ಯುವಕ ಭೇಟಿಯಾದ ಎಂಬುದಾಗಿ ಹೇಳಿಕೊಂಡಿದ್ದಾನೆ.
ಡೇಟಿಂಗ್ ಅಪ್ಲಿಕೇಶನ್ ಮೂಲಕ ಹುಡುಗಿಯೊಬ್ಬಳನ್ನು ಭೇಟಿಯಾದೆ. ಆ ರಾತ್ರಿ ನಾನು ಹೆಚ್ಚಿನ ಯೋಜನೆ ಹಾಕಿರಲಿಲ್ಲ. ಹಾಗಾಗಿ ಕೇವಲ ಭೇಟಿಯಾಗಳಷ್ಟೇ ಹೋಗಿದ್ದೆ. ಅದಕ್ಕೂ ಮೊದಲು ನಾನು ಸಂಭಾಷಣೆಗಳನ್ನು ನಡೆಸಿದ್ದೆ ಎಂದು ವ್ಯಕ್ತಿಯೊಬ್ಬ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾನೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಹುಡುಗಿ ತನ್ನ ಹತ್ತಿರದ ಸ್ಥಳಕ್ಕೆ ಬರಲು ಕೇಳಿದಳು. “ಪಾಬ್ಲೊ ಬಾರ್ ಮತ್ತು ಲೌಂಚ್” ಗೆ ಬರುವಂತೆ ಹೇಳಿದಳು. ನಾವಿಬ್ಬರು ಕುಳಿತು ಉತ್ತಮ ರೀತಿಯಲ್ಲಿ ಸಂಭಾಷಣೆಗಳನ್ನು ನಡೆಸಿದೆವು. ಅವಳು ಎಷ್ಟು ಮಿಲಿ ಬೇಕು ಎಂದು ಕೂಡ ಕೇಳದೆ ನೀಲಿ ಲೇಬಲ್‌ಗಳ ಮದ್ಯವನ್ನು ಆರ್ಡರ್ ಮಾಡುತ್ತಲೇ ಇದ್ದಳು. ವಾರಾಂತ್ಯವಾದ್ದರಿಂದ ನಾನು ಸ್ವಲ್ಪ ಬಿಯರ್ ಮತ್ತು ವೋಡ್ಕಾವನ್ನು ಸೇವಿಸಿದೆ.
ಕೊನೆಗೆ ಬಿಲ್ ಬಂದಾಗ ಅದು ಬಹುದೊಡ್ಡ ಶಾಕ್ ನೀಡಿತ್ತು. ಒಟ್ಟು 24,000 ರೂ. ಜೊತೆಗೆ ಸೇವಾ ಶುಲ್ಕ 2,000 ರೂ.ಗಳಾಗಿತ್ತು. ನನಗೆ ಕೇವಲ 2,000 ರೂ. ಆಗಿದ್ದರೆ ಉಳಿದದ್ದು ಆ ಯುವತಿ ಸೇವಿಸಿದ ಮದ್ಯದ ಬಿಲ್ ಆಗಿತ್ತು ಎಂಬುದನ್ನು ಯುವಕ ಹೇಳಿಕೊಂಡಿದ್ದಾನೆ. ಕೊನೆಗೆ ನಾನು 10,000 ರೂ. ಪಾವತಿಸಿ ಅಲ್ಲಿಂದ ಸದ್ದಿಲ್ಲದೆ ಹೊರಬಂದೆ ಎಂದು ಹೇಳಿಕೊಂಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!