ಉದಯವಾಹಿನಿ, ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ 173 ರನ್ ಗಳಿಸಿ ಕ್ರೀಸ್‌ಗೆ ಬಂದಾಗ, ನೆರೆದಿದ್ದ ಜನರೆಲ್ಲಾ ಅವರು ದ್ವಿಶತಕ ಗಳಿಸುವುದನ್ನ ನೋಡಲು ಕಾತರರಾಗಿದ್ದರು. ಆದ್ರೆ ಸಣ್ಣ ಎಡವಟ್ಟಿನಿಂದ ದ್ವಿಶತಕ ಗಳಿಸುವ ಅವಕಾಶದಿಂದ ವಂಚಿತರಾದರು. ಜೈಸ್ವಾಲ್ ಪೆವಿಲಿಯನ್ ಸೇರಿದ ಬಳಿಕ ನಾಯಕ ಗಿಲ್ ಶತಕದ ನೆರವಿನಿಂದ ಭಾರತ, ವೆಸ್ಟ್ ಇಂಡೀಸ್ ವಿರುದ್ಧ 518 ರನ್‌ಗೆ 5 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು.
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿರುವ ವಿಂಡೀಸ್ ತಂಡ 2ನೇ ದಿನದ ಅಂತ್ಯಕ್ಕೆ 43 ಓವರ್‌ಗಳಲ್ಲಿ 140 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ಟೆವಿನ್ ಇಮ್ಲಾಚ್ 14 ರನ್, ಶಾಯಿ ಹೋಪ್ 31 ರನ್ ಗಳಿಸಿ ಕ್ರೀಸ್‌ನಲ್ಲಿಂದು ಭಾನುವಾರ 3ನೇ ದಿನದ ಆಟ ಆರಂಭಿಸಲಿದ್ದಾರೆ.
ದ್ವಿಶತಕ ಸನಿಹದಲ್ಲಿ ರನೌಟ್: ಜೇಡನ್ ಸೀಲ್ಸ್ ಅವರ ಬೌಲಿಂಗ್‌ನಲ್ಲಿ ಮಿಡ್-ಆಫ್ ಕಡೆಗೆ ಚೆಂಡನ್ನು ತಳ್ಳಿ ಯಶಸ್ವಿ ಒಂದು ರನ್‌ಗಾಗಿ ಓಡಿದರು. ಆದರೆ, ಅರ್ಧ ದೂರ ಕ್ರಮಿಸುವ ವೇಳೆಗೆ ಇನ್ನೊಂದು ತುದಿಯಲ್ಲಿದ್ದ ನಾಯಕ ಶುಭಮನ್ ಗಿಲ್ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ತಕ್ಷಣ ಎಚ್ಚೆತ್ತ ಟ್ಯಾಗನರೈನ್ ಚಂದ್ರಪಾಲ್ ತ್ವರಿತವಾಗಿ ಚೆಂಡನ್ನು ಹಿಡಿದು ವಿಕೆಟ್ ಕೀಪರ್ ಟೆವಿನ್ ಇಮ್ಲಾಕ್ ಎಸೆದರು. ಇಮ್ಲಾಕ್ ಸ್ಟಂಪ್ಸ್‌ಗಳನ್ನು ಉರುಳಿಸಿ ರನ್ ಔಟ್ ಮಾಡಿದರು. ನಾಯಕ ಶುಭಮನ್ ಗಿಲ್ ಅವರೊಂದಿಗಿನ ಗೊಂದಲಮಯ ಓಟದಿಂದಾಗಿ ಯಶಸ್ವಿ ಕೇವಲ 175 ರನ್‌ಗಳಿಗೆ ತಮ್ಮ ಆಟವನ್ನು ಮುಗಿಸಬೇಕಾಯಿತು. ದ್ವಿಶತಕದಿಂದ ವಂಚಿತರಾಗಿದ್ದಕ್ಕೆ ತೀವ್ರ ನಿರಾಶೆಗೊಂಡ ಯಶಸ್ವಿ ಜೈಸ್ವಾ, ತಮ್ಮ ಹಣೆಗೆ ಬಡಿದುಕೊಂಡು ಮೈದಾನದಿಂದ ಹೊರನಡೆದರು.
10ನೇ ಟೆಸ್ಟ್ ಶತಕ, ಒಂದೇ ವರ್ಷದಲ್ಲಿ 5 ಶತಕ: ಇನ್ನೂ ಭಾರತ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ತಮ್ಮ 10ನೇ ಟೆಸ್ಟ್ ಶತಕವನ್ನು ಭಾರಿಸಿ ರೆಕಾರ್ಡ್ ಮುರಿದಿದ್ದಾರೆ. 26 ವರ್ಷದ ಗಿಲ್, ನಾಯಕನಾಗಿ ತಮ್ಮ ಐದನೇ ಶತಕ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್‌ನಲ್ಲಿ ಚಿನ್ನದ ಓಟವನ್ನು ಮುಂದುವರೆಸಿದರು. ಶನಿವಾರ ಮಧ್ಯಾಹ್ನದ ಊಟದ ವಿರಾಮದ ನಂತರ, ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿದ್ದು, ನಾಯಕನಾಗಿ ಐದನೇ ಟೆಸ್ಟ್ ಶತಕದೊಂದಿಗೆ, ಗಿಲ್ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ, ಭಾರತದ ಟೆಸ್ಟ್ ತಂಡದ ನಾಯಕರಾಗಿ ಅತಿ ಹೆಚ್ಚು ಶತಕಗಳ ವಿಷಯದಲ್ಲಿ ಎಂ.ಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು. ಇಂಗ್ಲೆಂಡ್‌ನಲ್ಲಿ ನಡೆದ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ತಮ್ಮ ಮೊದಲ ಸರಣಿಯಲ್ಲಿಯೇ ನಾಲ್ಕು ಶತಕಗಳನ್ನು ಗಳಿಸಿದ್ದರು. ವಿರಾಟ್ ಕೊಹ್ಲಿ 20 ಶತಕಗಳೊಂದಿಗೆ ಭಾರತದ ಟೆಸ್ಟ್ ನಾಯಕರಾಗಿ ಅಗ್ರಸ್ಥಾನದಲ್ಲಿದ್ದಾರೆ, ನಂತರ ಸುನಿಲ್ ಗವಾಸ್ಕರ್ 11 ಮತ್ತು ಮೊಹಮ್ಮದ್ ಅಜರುದ್ದೀನ್ 9 ಶತಕಗಳ ಪಟ್ಟಿಯಲ್ಲಿ ಇದ್ದಾರೆ.
