ಉದಯವಾಹಿನಿ, ನವದೆಹಲಿ: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಅವರನ್ನ ಶಾಸಕ ಸ್ಥಾನದಿಂದ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ. ನಾಲ್ಕು ವಾರಗಳಲ್ಲಿ ಈ ಬಗ್ಗೆ ಉತ್ತರಿಸುವಂತೆ ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ, ಶಾಸಕ ಸ್ಥಾನದಿಂದ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿತು. 4 ವಾರಗಳಲ್ಲಿ ಪ್ರತಿವಾದಿಗಳು ಉತ್ತರಿಸಬೇಕು ಎಂದು ಸೂಚನೆ ನೀಡಿತು. ಅಲ್ಲದೇ ಮತ ಮರು ಎಣಿಕೆ ನಡೆಸಿ ಫಲಿತಾಂಶ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು.
2023 ಫಲಿತಾಂಶದ ಮರು ಎಣಿಕೆ ಕೋರಿ ಪರಾರ್ಜಿತ ಅಭ್ಯರ್ಥಿ ಮಂಜುನಾಥಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಹಾಲಿ ಕಾಂಗ್ರೆಸ್‌ (Congress) ಶಾಸಕ ಕೆ.ವೈ ನಂಜೇಗೌಡ ಅವರ ಶಾಸಕತ್ವವನ್ನು ಅಸಿಂಧು ಮಾಡಿ, ಮತ ಮರು ಎಣಿಕೆಗೆ ಸೂಚನೆ ನೀಡಿತು. ಅಸಿಂಧು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಸಮಯ ನೀಡಿತ್ತು.
ಹೈಕೋರ್ಟ್ ಆದೇಶದಂತೆ ಸುಪ್ರೀಂ ಕೋರ್ಟ್‌ಗೆ (Supreme Court) ಮೇಲ್ಮನವಿ ಸಲ್ಲಿಸಿದ ಕೆ.ವೈ ನಂಜೇಗೌಡ ಸದ್ಯ ತಾತ್ಕಲಿಕ ರಿಲಿಫ್ ಪಡೆದಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಶಾಸಕ ಕೆ.ವೈ ನಂಜೇಗೌಡ, ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಕ್ಕಿದ್ದು ಸಂತೋಷವಾಗಿದೆ. ಮರು ಮತ ಎಣಿಕೆಗೆ ನಾನು ಬೇಡ ಎನ್ನಲ್ಲ ಎಂದು ಹೈಕೋರ್ಟ್ ನಲ್ಲಿ‌ ಕೇಸ್ ಹಾಕಿದಾಗಲೇ ನಾನು ಬಿಜೆಪಿ ಅಭ್ಯರ್ಥಿ‌ಗೆ ಹೇಳಿದ್ದೆ. ಇಂದು ಸುಪ್ರೀಂ ಕೋರ್ಟ್ ನಲ್ಲಿ ಅಸಿಂಧು ಆದೇಶಕ್ಕೆ ತಡೆ ನೀಡಿದೆ. ಮರು ಮತ ಎಣಿಕೆಗೆ ಕೋರ್ಟ್ ಸೂಚನೆ ನೀಡಿದೆ. ಮರು ಮತ ಎಣಿಕೆ ಆದರೂ ನಾನು ಗೆಲ್ಲುತ್ತೇನೆ, ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶ ಕೊಡಿ ಅಂದಿದ್ದಾರೆ. ನಾನು ಸಂತೋಷದಿಂದ ಇದಿನಿ‌, ಕ್ಷೇತ್ರದ ಜನರು ನೋವಲ್ಲಿ ಇದ್ದರು ಬಿಜೆಪಿ ವಾಮಮಾರ್ಗ ಹಿಡಿಯುತ್ತದೆ, ಕಾಂಗ್ರೆಸ್ ಹಾಗೆ ಮಾಡಲ್ಲ ಎಂದರು.

 

Leave a Reply

Your email address will not be published. Required fields are marked *

error: Content is protected !!