ಉದಯವಾಹಿನಿ, ಬೆಂಗಳೂರು: ಹೊಸ ವರ್ಷ ಮತ್ತು ಕ್ರಿಸ್ಮಸ್ ಸಂಭ್ರಮದ ಮಧ್ಯೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಸಂಭವಿಸಿದ ಬಸ್ ಅಪಘಾತ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ದುರಂತದ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಾಹನಗಳ ರಾತ್ರಿ ಸಂಚಾರದ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಅಪಘಾತಗಳು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ಪ್ರಮುಖ ಕಾರಣ ಚಾಲಕರು ನಿದ್ರೆ ಮಂಪರಿನಲ್ಲಿ ವಾಹನ ಚಾಲನೆ ಮಾಡುತ್ತಿರೋದು. ಹೀಗಾಗಿ ರಾತ್ರಿ ಸಮಯ ಸಂಚಾರ ಮಾಡೋರು ಸಂಜೆಯೇ ನಿದ್ದೆ ಮಾಡಿ ಎದ್ದರೇ ಒಳ್ಳೆಯದು. ಈ ನಿದ್ದೆ ಮಂಪರಿನಿಂದ ಆಗೋ ಅನಾಹುತ ತಪ್ಪಿಸಲು ಚಾಲಕರು ಕೆಲಸಮಯ ವಾಹನಗಳನ್ನ ನಿಲ್ಲಿಸಿ ವಿಶ್ರಾಂತಿ ಮಾಡಬೇಕು. ಅದರಲ್ಲೂ ಮಧ್ಯರಾತ್ರಿ 12ರಿಂದ 4 ಗಂಟೆವರೆಗೆ ನಾಲ್ಕು ಗಂಟೆಗಳ ಕಾಲ ನ್ಯಾಷನಲ್ ಹೈವೇಗಳ ಬೇಸ್‌ಗಳಲ್ಲಿ ವಿಶ್ರಾಂತಿ ಪಡೆಯುವಂತೆ ಹೊಸ ಗೈಡ್‌ಲೈನ್ಸ್ ಅನ್ನು ಕೇಂದ್ರ ಸರ್ಕಾರ ರೂಪಿಸುವಂತೆ ಪತ್ರ ಬರೆಯುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಇನ್ನೂ ರಾತ್ರಿ ಸಮಯ ಟ್ರಕ್, ಲಾರಿ, ಬಸ್ ಚಾಲಕರು ನಾಲ್ಕು ಗಂಟೆವರೆಗೂ ವಿಶ್ರಾಂತಿ ಮಾಡಿ ಆಮೇಲೆ ಚಾಲನೆ ಮಾಡಲಿ. ಬಸ್‌ಗಳಲ್ಲಿ ಇಬ್ಬರು ಡ್ರೈವರ್ ಇರುತ್ತಾರೆ. ಆದರೆ, ಟ್ರಕ್ ಲಾರಿಗಳಲ್ಲಿ ಒಬ್ಬರೇ ಇರುತ್ತಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಕೊಡಲಿ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಜೊತೆಗೆ ಹಿರಿಯೂರಿನಲ್ಲಿ ನಡೆದ ಬಸ್ ದುರಂತದ ಸ್ಥಳದಲ್ಲಿ ಪದೇ ಪದೇ ಆಕ್ಸಿಡೆಂಟ್‌ಗಳು ಆಗುತ್ತಿದ್ದು, ಈ ಬಗ್ಗೆ ಕೇಂದ್ರ ಗಮನಹರಿಸಬೇಕೆಂದು ತಿಳಿಸಿದ್ದಾರೆ.
