ಉದಯವಾಹಿನಿ, ಚೆನ್ನೈ: ಆಸ್ಟ್ರೇಲಿಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಭಾರತದಲ್ಲೂ ಅಂತಹದ್ದೇ ಕಾನೂನು ಜಾರಿಗೆ ತರುವ ಸಾಧ್ಯತೆಗಳನ್ನ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಅಪ್ರಾಪ್ತರು ಸೋಷಿಯಲ್ ಮೀಡಿಯಾದಲ್ಲಿ ಸುಲಭವಾಗಿ ಅಶ್ಲೀಲ ವಿಷಯಗಳಿಗೆ ಒಡ್ಡಿಕೊಳ್ಳುತ್ತಿರುವುದನ್ನ ತಡೆಗಟ್ಟಲು ಆಸ್ಟ್ರೇಲಿಯಾ ಮಾದರಿ ಕಾನೂನನ್ನ ಭಾರತದಲ್ಲಿ ಪರಿಗಣಿಸಬೇಕು ಎಂದು ಮದ್ರಾಸ್ ಕೋರ್ಟ್ ಸಲಹೆ ನೀಡಿದೆ. ನ್ಯಾಯಮೂರ್ತಿಗಳಾದ ಜಿ. ಜಯಚಂದ್ರನ್ ಮತ್ತು ಕೆ.ಕೆ ರಾಮಕೃಷ್ಣನ್ ಅವರಿದ್ದ ವಿಭಾಗೀಯ ಪೀಠವು ಪಿಐಎಲ್ ಅರ್ಜಿ ವಿಚಾರಣೆ ನಡೆಸುತ್ತಿದ್ದ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂಟರ್‌ನೆಟ್ ಸೇವೆ ಒದಗಿಸುವವರು ಪೋಷಕರ ನಿಯಂತ್ರಣ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಇನ್ನು ಮಕ್ಕಳ ಇಂಟರ್‌ನೆಟ್ ಬಳಕೆಯಲ್ಲಿನ ಅಪಾಯಗಳನ್ನ ನ್ಯಾಯಾಲಯ ಒಪ್ಪಿಕೊಂಡಿದ್ದು, ಇದ್ರಲ್ಲಿ ಪೋಷಕರ ಜವಾಬ್ದಾರಿಯೂ ಹೆಚ್ಚು ಎಂದಿದೆ. ಆಸ್ಟ್ರೇಲಿಯಾದಲ್ಲಿ ಈ ಕಾನೂನನ್ನು ಡಿಸೆಂಬರ್ 10ರಿಂದಲೇ ಜಾರಿಗೊಳಿಸಲಾಗಿದೆ.
