ಉದಯವಾಹಿನಿ, ಪಾಕಿಸ್ತಾನ ಸರ್ಕಾರ ಪಿಒಕೆ ಜನರ ವಿರುದ್ಧ ಮಾಡುತ್ತಿರುವ ತಾರತಮ್ಯದ ಬಗ್ಗೆ ಸಿಡಿದೆದ್ದಿದ್ದಾರೆ. ಇದೇ ತಿಂಗಳ ಆರಂಭದಲ್ಲಿ (ಅಕ್ಟೋಬರ್) ಪಿಒಕೆ ಪಾಕ್ ನಡುವೆ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆದರೆ ಪಾಕ್ ಮಾತ್ರ ಇದು ವಿದೇಶದ (ಭಾರತದ) ಕುತಂತ್ರ ಎಂದು ಆರೋಪಿಸಿತ್ತು. ಏನಿದು ಪಾಕ್ – ಪಿಒಕೆ ವಿವಾದ? ಭಾರತದ ಕಡೆ ಪಾಕ್ ಬೊಟ್ಟು ಮಾಡ್ತಿರೋದು ಯಾಕೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಪಾಕ್ ಸರ್ಕಾರದ ವಿರುದ್ಧ ಜಂಟಿ ಅವಾಮಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗಳಿಂದ ಪಿಒಕೆ ನಲುಗಿದೆ. ಪ್ರತಿಭಟನೆಗಳಿಂದಾಗಿ ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸ್ಥಳೀಯ ವ್ಯವಹಾರಗಳು ಸ್ಥಗಿತಗೊಂಡಿವೆ. ಪಿಒಕೆಯಲ್ಲಿ ಸ್ವಾತಂತ್ರ್ಯದ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ.1947-48ರ ಭಾರತ – ಪಾಕ್‌ನಡುವಿನ ಯುದ್ಧ ಮತ್ತು ಕದನ ವಿರಾಮದ ಬಳಿಕ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು ಪಾಕಿಸ್ತಾನದ ವಶದಲ್ಲಿಯೇ ಉಳಿದವು. ಪಿಒಕೆ 13,300 ಚದರ ಕಿಲೋಮೀಟರ್ ಭೂ ಪ್ರದೇಶ ಹೊಂದಿದ್ದು ಸುಮಾರು 52 ಲಕ್ಷ ಜನರು ಇಲ್ಲಿ ನೆಲೆಸಿದ್ದಾರೆ. ಪಿಒಕೆ ನಾಮಮಾತ್ರವಾಗಿ ಸ್ವಾಯತ್ತ ಪ್ರದೇಶವಾಗಿದ್ದರೂ, ಇದನ್ನು ಪಾಕಿಸ್ತಾನ ನಿಯಂತ್ರಿಸುತ್ತಿದೆ.
ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದ ಜಾಗವನ್ನು ಭಾರತ ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆದರೆ ಪಾಕಿಸ್ತಾನ ಅದಕ್ಕೆ ಅಜಾದ್ ಕಾಶ್ಮೀರ ಎಂಬ ಹೆಸರನ್ನು ಇಟ್ಟಿದೆ. ಇಲ್ಲಿ ಪ್ರತ್ಯೇಕ ಸರ್ಕಾರವಿದ್ದು ಅಧ್ಯಕ್ಷ, ಪ್ರಧಾನ ಮಂತ್ರಿ ಇದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಇದೆ. ಅಜಾದ್ ಕಾಶ್ಮೀರ ಸ್ವಾಯತ್ತ ಪ್ರದೇಶವಾಗಿರುವ ಕಾರಣ ಪಾಕಿಸ್ತಾನ ಸಂಸತ್ತಿನಲ್ಲಿ ಇದಕ್ಕೆ ಪ್ರತಿನಿಧಿಯಿಲ್ಲ. ಆಜಾದ್ ಕಾಶ್ಮೀರ ಶಾಸಕಾಂಗ ಸಭೆ 53 ಮಂದಿ ಸದಸ್ಯರನ್ನು ಹೊಂದಿದ್ದು, ಪಾಕಿಸ್ತಾನದ ಕಾಶ್ಮೀರ ವ್ಯವಹಾರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಸಚಿವಾಲಯ ಪಾಕ್ ಸರ್ಕಾರ ಮತ್ತು ಪಿಒಕೆ ಜೊತೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಇಲ್ಲಿನ ಪ್ರಧಾನಿ ಮತ್ತು ಅಧ್ಯಕ್ಷರು ಪಾಕ್ ಸರ್ಕಾರದ ಕೈಗೊಂಬೆಗಳಾಗಿದ್ದಾರೆ.
