
ಉದಯವಾಹಿನಿ, ಕಂದಹಾರ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಗಡಿ ಸಂಘರ್ಷ ತೀವ್ರಗೊಂಡಿದ್ದು, ಎರಡು ರಾಷ್ಟ್ರಗಳಲ್ಲಿಯೂ ಉದ್ವಿಗ್ನತೆ ಹೆಚ್ಚಾಗಿದೆ. ದಿನದಿಂದ ದಿನಕ್ಕೆ ಈ ಘರ್ಷಣೆ ಭೀಕರತೆಯ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಅಫ್ಘನ್ ಪಡೆಗಳು ಪಾಕ್ ಸೇನೆ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಇದೀಗ ಪಾಕ್ ಸೇನೆ ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ಸ್ಪಿನ್ ಬೋಲ್ಡಾಕ್ ಜಿಲ್ಲೆಯ ಮೇಲೆ ದಾಳಿ ನಡೆಸಿದ್ದು, ಈ ಸಂಘರ್ಷದಲ್ಲಿ 12 ನಾಗರಿಕರು ಹತರಾಗಿದ್ದಾರೆ. 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅಫ್ಘಾನ್ ಅಧಿಕಾರಿಯೊಬ್ಬರು ಗಡಿಯಲ್ಲಿ ರಾತ್ರಿಯಿಡೀ ನಡೆದ ಘರ್ಷಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕ್ ಪಡೆಗಳು ಲಘು ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿ ಗುಂಡಿನ ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಜಬಿಹುಲ್ಲಾ ಮುಜಾಹಿದ್ ಆರೋಪಿಸಿದ್ದಾರೆ. ಇದೀಗ ಪಾಪಿ ಪಾಕ್ ಮತ್ತೇ ದಾಳಿ ನಡೆಸಿದ್ದು, ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನಿ ಪಡೆಗಳು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿವೆ. ಈ ಘರ್ಷನೆಯಲ್ಲಿ 12 ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮುಜಾಹಿದ್ ತಿಳಿಸಿದ್ದಾರೆ. ಅಲ್ಲದೇ ಈ ಪ್ರತೀಕಾರದ ದಾಳಿಯಲ್ಲಿ ಅನೇಕ ಪಾಕಿಸ್ತಾನಿ ಸೈನಿಕರು ಹತ್ಯೆಯಾಗಿದ್ದು, ಪಾಕಿಸ್ತಾನಿ ಮಿಲಿಟರಿ ಕಟ್ಟಡಗಳು ಸೇರಿದಂತೆ ಅವರ ಶಿಬಿರ ಕೇಂದ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
