ಉದಯವಾಹಿನಿ, ವಾಷಿಂಗ್ಟನ್: ಅಮೆರಿಕ ರಾಷ್ಟ್ರದ ರಕ್ಷಣೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನ ಅನಧಿಕೃತವಾಗಿ ತಮ್ಮ ಬಳಿ ಸಂಗ್ರಹಿಸಿದ್ದ ಹಾಗೂ ಕೆಲ ವರ್ಷದ ಹಿಂದೆ ಚೀನಾ ಜೊತೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಭಾರತದ ಮುಂಬೈ ಮೂಲದ ಅಮೆರಿಕನ್ ವಿಶ್ಲೇಷಕ ಹಾಗೂ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್‌ರನ್ನ ಬಂಧಿಸಲಾಗಿದೆ.
64 ವರ್ಷದ ಆಶ್ಲೇ ಟೆಲ್ಲಿಸ್ ತಮ್ಮ ವಿಯೆನ್ನಾ, ವರ್ಜೀನಿಯಾದ ಮನೆಯಲ್ಲಿ ವಾಯುಪಡೆಯ ತಂತ್ರಗಳು ಮತ್ತು ವಿಧಾನಗಳಿಗೆ ಸಂಬಂಧಿಸಿದ 1000ಕ್ಕೂ ಹೆಚ್ಚು ಪುಟಗಳಷ್ಟು ರಹಸ್ಯ ದಾಖಲೆಗಳನ್ನು ಇಟ್ಟುಕೊಂಡಿದ್ದರು. ಈ ಮೂಲಕ 18 USC § 793(e) ನಿಯಮ ಉಲ್ಲಂಘನೆ ಮಾಡಿದ್ದಾರೆ. ಶನಿವಾರ ಅವರನ್ನ ಬಂಧಿಸಿದ್ದು, ಸೋಮವಾರ ಅಧಿಕೃತವಾಗಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ ಎಂದು ವರ್ಜೀನಿಯಾದ ಪೂರ್ವ ಜಿಲ್ಲೆಯ ಅಮೆರಿಕದ ಅಟಾರ್ನಿ ಕಚೇರಿ ತಿಳಿಸಿದೆ.
ಮುಂಬೈ ಮೂಲದ ಆಶ್ಲೇ ಈ ಹಿಂದೆ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ. ಬುಷ್ ಅವರ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕೆಲಸ ಮಾಡಿದ್ದರು. ವಿದೇಶಾಂಗ ಇಲಾಖೆಗೆ ಗೌರವ ಸಂಭಾವನೆ ರಹಿತ ಸಲಹೆಗಾರರಾಗಿಯೂ ಮತ್ತು ಪೆಂಟಗನ್ ಆಫೀಸ್ ಆಫ್ ನೆಟ್ ಅಸೆಸ್‌ಮೆಂಟ್‌ನ ಗುತ್ತಿಗೆದಾರರಾಗಿಯೂ ವೃತ್ತಿ ಜೀವನ ನಡೆಸಿದ್ದಾರೆ.
ಅಮೆರಿಕ ಸೇನಾ ವಿಮಾನಗಳ ಸಾಮರ್ಥ್ಯಕ್ಕೆ ಸಂಬಂಧಿಸಿದ ಗೌಪ್ಯ ಕಡತಗಳನ್ನ 2025ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗಳ ಕಟ್ಟಡದಿಂದ ರಹಸ್ಯ ಮಾಹಿತಿ ಸಂಗ್ರಹಿಸಿದ್ದಾರೆ. ದಾಖಲೆಗಳನ್ನ ಮುದ್ರಿಸಿ ಲೆದರ್ ಬ್ರೀಫ್‌ಕೇಸ್‌ನೊಂದಿಗೆ ಒಂದು ಕಟ್ಟಡದಿಂದ ಹೊರಬರುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅಕ್ಟೋಬರ್ 11 ರಂದು ಅವರ ನಿವಾಸದಲ್ಲಿ ಶೋಧ ನಡೆಸಿದಾಗ ಹಲವಾರು ರಹಸ್ಯ ಕಡತಗಳು ಪತ್ತೆಯಾಗಿವೆ. ಕಸದ ಬುಟ್ಟಿಯಲ್ಲಿಯೂ ದಾಖಲೆಗಳು ಸಿಕ್ಕಿವೆ ಎಂದು ವರದಿಗಳಿಂದ ತಿಳಿದುಬಂದಿದೆ. ಬಳಿಕ ಅವರನ್ನ ಬಂಧಿಸಲಾಗಿದೆ.ತು ಅಮೆರಿಕ ಆಡಳಿತಗಳಿಗೆ ಸಲಹೆ ನೀಡುವಲ್ಲಿ ಟೆಲ್ಲಿಸ್ ಹೆಸರುವಾಸಿಯಾಗಿದ್ದಾರೆ.
