ಉದಯವಾಹಿನಿ, ಪೊಜಾ ರಿಕಾ : ಮೆಕ್ಸಿಕೋದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದೆ. ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಪ್ರವಾಹ, ಭೂಕುಸಿತ ಸಂಬಂಧಿತ ಪ್ರಕರಣಗಳಲ್ಲಿ 64 ಮಂದಿ ಮೃತಪಟ್ಟರೆ, 65 ಮಂದಿ ನಾಪತ್ತೆಯಾಗಿದ್ದಾರೆ. ಹಲವೆಡೆ ಸಂಪರ್ಕ ಕಡಿತಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ವರದಿಯಾಗಿದೆ.ಕಳೆದೊಂದು ವಾರದಿಂದ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಹಲವು ರಾಜ್ಯಗಳು ಬಾಧಿತವಾಗಿವೆ. ರಸ್ತೆಗಳೆಲ್ಲಾ ನದಿಗಳಾಗಿ ಪರಿವರ್ತಿತವಾಗಿವೆ. ಭೂಕುಸಿತಗಳಿಂದ ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ.
ಆಹಾರ, ನೀರಿಗಾಗಿ ಪರದಾಟ: ತೀವ್ರ ಪ್ರವಾಹದಿಂದ ಹಲವು ಪ್ರದೇಶಗಳ ಸಂಪರ್ಕ ಕಡಿತವಾಗಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಜನರು ಆಹಾರ ಮತ್ತು ಇತರ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
“ಪ್ರವಾಹದಲ್ಲಿ ಸಿಲುಕಿದ ಜನರ ರಕ್ಷಣೆಗಾಗಿ ವಿವಿಧ ತಂಡಗಳು ಕಾರ್ಯನಿರತವಾಗಿವೆ. ದೋಣಿಗಳು, ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳ ಮೂಲಕ ಸುಮಾರು 10 ಸಾವಿರ ಯೋಧರು ಜನರಿಗೆ ಆಹಾರ, ನೀರು ಸರಬರಾಜು ಮಾಡುತ್ತಿದ್ದಾರೆ” ಎಂದು ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಹೇಳಿದ್ದಾರೆ.”ಮನೆ ಕಳೆದುಕೊಂಡವರಿಗೆ ಆಶ್ರಯ ತಾಣಗಳನ್ನು ಆರಂಭಿಸಲಾಗಿದೆ. ಸಂಪರ್ಕ ಕಡಿತಗೊಂಡ ಜನರಿಗೆ ಅಗತ್ಯ ವಸ್ತುಗಳನ್ನು ಹೆಲಿಕಾಪ್ಟರ್‌ಗಳ ಮೂಲಕ ನೀಡಲಾಗುತ್ತಿದೆ. ಈ ಕೊರತೆಯನ್ನು ನೀಗಸಲು ಇನ್ನಷ್ಟು ವಿಮಾನಗಳು ಬೇಕಾಗುತ್ತವೆ” ಎಂದು ಅಧ್ಯಕ್ಷರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಮೆಕ್ಸಿಕೋದ ನಾಗರಿಕ ರಕ್ಷಣಾ ಪ್ರಾಧಿಕಾರದ ಮುಖ್ಯಸ್ಥೆ ಲಾರಾ ವೆಲಾಜ್ಕ್ವೆಜ್ ಅವರ ಪ್ರಕಾರ, “ವೆರಾಕ್ರೂಜ್, ಹಿಡಾಲ್ಗೊ ಮತ್ತು ಪ್ಯೂಬ್ಲಾ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹದಿಂದ ಬಾಧಿತವಾಗಿವೆ. ಹಿಡಾಲ್ಗೊ ರಾಜ್ಯವೊಂದರಲ್ಲೇ, 43 ಜನರು ಕಾಣೆಯಾಗಿದ್ದಾರೆ. ಕೇವಲ 12 ಗಂಟೆಗಳ ಅವಧಿಯಲ್ಲಿ 47 ಮಂದಿ ಸಾವಿಗೀಡಾದ ಮಾಹಿತಿ ಬಂದಿದೆ. ಇದು ವಿಪತ್ತಿನ ವೇಗದ ಪ್ರಮಾಣವನ್ನು ಸೂಚಿಸುತ್ತದೆ” ಎಂದು ಹೇಳಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!