ಉದಯವಾಹಿನಿ, ದುಬೈ: ನವದೆಹಲಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಎಂಟು ವಿಕೆಟ್ ಕಬಳಿಸಿದ ಭಾರತದ ಎಡಗೈ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ 7 ಸ್ಥಾನಗಳ ಜಿಗಿತ ಕಂಡು ಜೀವನಶ್ರೇಷ್ಠ 14ನೇ ಸ್ಥಾನ ಪಡೆದಿದ್ದಾರೆ. ಬ್ಯಾಟಿಂಗ್ ಶ್ರೇಯಾಂಕದಲ್ಲಿ, ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 175 ರನ್ ಗಳಿಸುವ ಮೂಲಕ ಎರಡು ಸ್ಥಾನ ಬಡ್ತಿ ಪಡೆದು ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಕೆ.ಎಲ್ ರಾಹುಲ್ ಎರಡು ಸ್ಥಾನ ಪ್ರಗತಿ ಸಾಧಿಸಿ 33 ನೇ ಸ್ಥಾನಕ್ಕೆ ತಲುಪಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ ವೆಸ್ಟ್ ಇಂಡೀಸ್ ತಂಡದ ಶೈ ಹೋಪ್ (34 ಸ್ಥಾನ ಬಡ್ತಿ ಪಡೆದು 66ನೇ ಸ್ಥಾನ) ಮತ್ತು ಜಾನ್ ಕ್ಯಾಂಪ್‌ಬೆಲ್ (6 ಸ್ಥಾನ ಬಡ್ತಿ ಪಡೆದು 68ನೇ ಸ್ಥಾನ) ಜಿಗಿತ ಕಂಡಿದ್ದಾರೆ.
ಏತನ್ಮಧ್ಯೆ, ಅಬುಧಾಬಿಯಲ್ಲಿ ಬಾಂಗ್ಲಾದೇಶ ವಿರುದ್ಧ 3-0 ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಅಫ್ಘಾನಿಸ್ತಾನ ಲೆಗ್ ಸ್ಪಿನ್ನರ್ ರಶೀದ್ ಖಾನ್ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ. ಎರಡನೇ ಪಂದ್ಯದಲ್ಲಿ ಐದು ವಿಕೆಟ್ ಸೇರಿದಂತೆ ಸರಣಿಯಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದ ರಶೀದ್, ಐದು ಸ್ಥಾನಗಳ ಬಡ್ತಿ ಪಡೆದು 710 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನ ಪಡೆದರು.
