ಉದಯವಾಹಿನಿ, ನವದೆಹಲಿ: ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡ ಇತ್ತೀಚೆಗೆ 2025ರ ಏಷ್ಯಾ ಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು. ಇದೀಗ ಭಾರತ ಟಿ20 ತಂಡ, ಮುಂದಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಪ್ರಶಸ್ತಿಯನ್ನು ಗೆಲ್ಲಲು ಎದುರು ನೋಡುತ್ತಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿಯೇ ಭಾರತ ಮುಂದಿನ ಟಿ20 ವಿಶ್ವಕಪ್ (T20 World Cup 2026) ಆಡಲಿದೆ. ಅಂದ ಹಾಗೆ ಸೂರ್ಯಕುಮಾರ್ ಯಾದವ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಬಗ್ಗೆ ಸುಳಿವು ನೀಡಿದ್ದಾರೆ. ಆದರೆ, ಮುಂದಿನ ಮೂರು ವರ್ಷಗಳ ಕಾಲ ಕ್ರಿಕೆಟ್ ಆಡುವ ಗುರಿಯನ್ನು ಹೊಂದಿರುವುದಾಗಿಯೂ ತಿಳಿಸಿದ್ದಾರೆ.
ಮಾತನಾಡಿದ ಸೂರ್ಯಕುಮಾರ್ ಯಾದವ್, ಮುಂದಿನ ಮೂರು-ನಾಲ್ಕು ವರ್ಷಗಳ ಕಾಲ ವೈಟ್‌ಬಾಲ್ ಕ್ರಿಕೆಟ್ ಕಡೆಗೆ ಗಮನ ನೀಡಬೇಕೆಂದು ಹೇಳಿದ್ದಾರೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟ ಹಾಗೂ ಇದಾದ ಬಳಿಕ ಮುಂದಿನ ವರ್ಷ ಮತ್ತೊಂದು ವಿಶ್ವಕಪ್ ಟೂರ್ನಿಯನ್ನು ಆಡಬೇಕೆಂದು ಗುರಿಯನ್ನು ಹೊಂದಿರುವುದಾಗಿ ಅವರು ತಿಳಿಸಿದ್ದಾರೆ. ಆಗ ಅವರ ವಯಸ್ಸು 37 ಅಥವಾ 38 ಆಗಬಹುದು.
ಪ್ರಸ್ತುತ ನನಗೆ 34 ಅಥವಾ 35 ವಯಸ್ಸಾಗಿದೆ ಎಂದು ಭಾಸವಾಗುತ್ತಿದೆ. ಮುಂದಿನ ಮೂರು ಅಥವಾ ನಾಲ್ಕು ವರ್ಷಗಳ ಕಾಲ ವೈಟ್‌ಬಾಲ್ ಕ್ರಿಕೆಟ್ ಕಡೆಗೆ ಗಮನ ಕೊಟ್ಟರೆ ನನಗೆ ಹಾಗೂ ತಂಡದ ಪಾಲಿಗೆ ಒಳ್ಳೆಯದಾಗಲಿದೆ. ತಂಡಕ್ಕೆ ಹೆಚ್ಚಿನ ಕೊಡುಗೆಯನ್ನು ಪರಿಣಾಮಕಾರಿಯಾಗಿ ನೀಡಲು ನಾನು ಶಕ್ತನಾಗಬಹುದು. ನಿಮಗೆ ನಿಜ ಹೇಳಬೇಕೆಂದರೆ, 2028ರ ಒಲಿಂಪಿಕ್ಸ್ ಹಾಗೂ ಟಿ20 ವಿಶ್ವಕಪ್ ನನ್ನ ಮನಸಿನಲ್ಲಿದೆ. ಸಂಗತಿಗಳು ಹೇಗೆ ಸಾಗಲಿವೆ ಎಂಬುದನ್ನು ನಾನು ಎಚ್ಚರಿಕೆಯಿಂದ ನೋಡುತ್ತೇನೆ. ಈ ವರ್ಷ ಹಾಗೂ ಮುಂದಿನ ವರ್ಷ ನನ್ನ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ. ಏಕೆಂದರೆ 37 ಅಥವಾ 38 ವರ್ಷ ವಯಸ್ಸಾದಾಗ ದೇಹ ಹೇಗಿರಬಹುದು ಎಂದು ನಿಮಗೆ ತಿಳಿದಿದೆ,” ಎಂದು ಹೇಳಿದ್ದಾರೆ.
