ಉದಯವಾಹಿನಿ, ಪಾಟ್ನಾ: ಬಿಹಾರದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಇನ್ನೂ ಅಂತಿಮಗೊಳ್ಳದ ಕಾರಣ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕರೆ ಮಾಡಿ ನೇರವಾಗಿ ಮಾತನಾಡಿದ್ದಾರೆ.
ಮೊದಲ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಶನಿವಾರ ಡೆಡ್‌ಲೈನ್ ಆಗಿದೆ. ಒಂದು ದಿನ ಮಾತ್ರ ಬಾಕಿ ಇದ್ದರೂ ಮೈತ್ರಿ ಪಕ್ಷದಲ್ಲಿ ಒಮ್ಮತ ಮೂಡಿಲ್ಲ.
2020ರಲ್ಲಿ ಕಾಂಗ್ರೆಸ್ (Congress) ಸ್ಪರ್ಧಿಸಿದ 70 ಕ್ಷೇತ್ರಗಳಲ್ಲಿ ಕೇವಲ 19 ರಲ್ಲಿ ಮಾತ್ರ ಜಯಗಳಿಸಿತ್ತು. ಹೀಗಿದ್ದರೂ ಕಾಂಗ್ರೆಸ್ ಅಷ್ಟೇ ಸ್ಥಾನಗಳನ್ನು ನೀಡುವಂತೆ ಕೇಳಿದ್ದು ಆರ್‌ಜೆಡಿ (RJD) ಸೋತ ಕ್ಷೇತ್ರಗಳನ್ನು ನೀಡಲು ಒಪ್ಪುತ್ತಿಲ್ಲ. ಹೀಗಾಗಿ ಸೀಟು ಹಂಚಿಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಮಾಧ್ಯಮಗಳು ವರದಿ ಮಾಡಿದಂತೆ ಕಳೆದ ಬಾರಿ ಆರ್‌ಜೆಡಿ 144 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದರೆ ಈ ಬಾರಿ 135 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಕಳೆದ ಬಾರಿ 70 ರಲ್ಲಿ ಕಣಕ್ಕೆ ಇಳಿದಿದ್ದರೆ ಈ ಬಾರಿ 60 ಕ್ಷೇತ್ರ ಪಡೆಯಬಹುದು ಎನ್ನಲಾಗುತ್ತಿದೆ.
ಮುಖೇಶ್ ಸಹಾನಿಯವರ ವಿಕಾಸಶೀಲ ಇನ್ಸಾನ್ ಪಾರ್ಟಿ 16 ಸ್ಥಾನಗಳು ಸಿಗುವ ಸಾಧ್ಯತೆಯಿದೆ. ತೇಜಸ್ವಿ ಯಾದವ್ ಅವರ ಆಡಳಿತದಲ್ಲಿ ಉಪಮುಖ್ಯಮಂತ್ರಿಯಾಗುವುದಾಗಿ ಬಹಿರಂಗವಾಗಿ ಹೇಳಿಕೊಳ್ಳುವ ಸಹಾನಿ 30 ರಿಂದ 40 ಸ್ಥಾನಗಳನ್ನು ಕೇಳುತ್ತಿದ್ದಾರೆ.
