ಉದಯವಾಹಿನಿ, ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ದೇವರ ದರ್ಶನಕ್ಕೆ ತೆರಳಿದ್ದ ದಂಪತಿ ಭದ್ರಾ ಜಲಾಶಯದ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಮೃತರನ್ನ ವಿಠಲ (48) ಹಾಗೂ ಗಂಗಮ್ಮ (40) ಎಂದು ಗುರುತಿಸಲಾಗಿದೆ. ಮೃತ ದಂಪತಿ ಮೂಲತಃ ಶಿವಮೊಗ್ಗದ ಭದ್ರಾವತಿ ತಾಲೂಕಿನ ಶಂಕರಪುರ ನಿವಾಸಿಗಳು. ದಂಪತಿ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಜಗದಾಂಭಾ ದೇವಸ್ಥಾನಕ್ಕೆ ಬಂದಿದ್ದರು. ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬಂದವರು ಭದ್ರಾ ಜಲಾಶಯದ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ.ಅವರು ಆತ್ಮಹತ್ಯೆಗೆ ಶರಣಾಗಿದ್ದಾರೋ ಅಥವಾ ಭದ್ರಾ ಜಲಾಶಯದ ಬಳಿ ಗಂಗೆ ಪೂಜೆ ಮಾಡುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೋ ಗೊತ್ತಾಗಿಲ್ಲ. ಆದರೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು ನಾಲೆ ಬಳಿ ಹೋಗಿದ್ದನ್ನ ಸ್ಥಳಿಯರು ನೋಡಿದ್ದಾರೆ. ಹಾಗಾಗಿ, ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೂ ಕೂಡ ಲಕ್ಕವಳ್ಳಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಸ್ಥಳಿಯರು ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಗಂಗಮ್ಮ ಮೃತದೇಹ ಪತ್ತೆಯಾಗಿದ್ದು, ವಿಠಲ ಅವರ ಮೃತದೇಹ ಪತ್ತೆಯಾಗಿಲ್ಲ.
