ಉದಯವಾಹಿನಿ, ಮುಂಬೈ : ದೀಪಾವಳಿ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಉತ್ಸಾಹ ಮನೆ ಮಾಡಿದೆ. ಸೆನ್ಸೆಕ್ಸ್ (Sensex) ಶುಕ್ರವಾರ 476 ಅಂಕ ಏರಿಕೆಯಾಗಿ 83,953ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 115 ಅಂಕ ಚೇತರಿಸಿ 25,699ಕ್ಕೆ ಸ್ಥಿರವಾಯಿತು. ಏಷ್ಯನ್ ಪೇಂಟ್ಸ್ 4%, ಮಹೀಂದ್ರಾ & ಮಹೀಂದ್ರಾ 3% ಏರಿಕೆಯಾಯಿತು. ದೀಪಾವಳಿಗೆ ನಿಫ್ಟಿ 50 ಸೂಚ್ಯಂಕವು ಶುಕ್ರವಾರ ಮಧ್ಯಂತರ ವಹಿವಾಟಿನಲ್ಲಿ 52 ವಾರಗಳ ಎತ್ತರಕ್ಕೇರಿದೆ. 25,700 ಅಂಕಗಳಿಗೆ ಜಿಗಿದಿದೆ. ಇದಕ್ಕೆ ಪ್ರಮುಖ ಕಾರಣಗಳೇನು ಎಂಬುದನ್ನು ವಿವರವಾಗಿ ತಿಳಿಯೋಣ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಪುನರಾಗಮನ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್ ಇನ್‌ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಹಲವಾರು ತಿಂಗಳುಗಳ ಬ್ರೇಕ್ ನಂತರ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮತ್ತೆ ಆರಂಭಿಸಿದ್ದಾರೆ. ಅಕ್ಟೋಬರ್ 7 ಮತ್ತು 14 ರ ನಡುವೆ ಐದು ಸೆಷನ್ಸ್‌ಗಳಲ್ಲಿ ಎಫ್‌ಐಐಗಳು ನಿವ್ವಳ ಖರೀದಿದಾರರಾಗಿದ್ದಾರೆ. ಸೆಕೆಂಡರಿ ಮಾರುಕಟ್ಟೆಗೆ 3,000 ಕೋಟಿ ರುಪಾಯಿಗಳನ್ನು ಹೂಡಿದ್ದಾರೆ ಎಂದು NSDL ಅಂಕಿ ಅಂಶಗಳು ತಿಳಿಸಿವೆ. ಇದೇ ಅವಧಿಯಲ್ಲಿ ಐಪಿಒ ಅಥವಾ ಪ್ರೈಮರಿ ಮಾರ್ಕೆಟ್ ನಲ್ಲಿ ಎಫ್‌ಐಐಗಳು 7,600 ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ. ಅಕ್ಟೋಬರ್ 16ರಂದು ಎಫ್‌ಐಐಗಳು 997 ಕೋಟಿ ರುಪಾಯಿ ಷೇರುಗಳನ್ನು ಖರೀದಿಸಿದ್ದರೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು 4,076 ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ.
ಎಫ್‌ಐಐಗಳ ಹೂಡಿಕೆಯ ಹೊರ ಹರಿವಿನಲ್ಲಿ ಕೆಲ ತಿಂಗಳಿನಿಂದೀಚೆಗೆ ಗಣನೀಯ ಕಡಿಮೆ ಆಗಿರುವುದನ್ನು ಗಮನಿಸಬಹುದು. ಉದಾಹರಣೆಗೆ ಅಕ್ಟೋಬರ್‌ನಲ್ಲಿ ಎಫ್‌ಐಐ ಹೊರಹರಿವು 903 ಕೋಟಿ ರುಪಾಯಿಗಳಾಗಿದ್ದರೆ, ಸೆಪ್ಟೆಂಬರ್‌ನಲ್ಲಿ 22,761 ಕೋಟಿ ರುಪಾಯಿಗಳಾಗಿತ್ತು. ಸೆಪ್ಟೆಂಬರ್‌ನಲ್ಲಿ 22,761 ಕೋಟಿ ರುಪಾಯಿ, ಆಗಸ್ಟ್‌ನಲ್ಲಿ 41,908 ಕೋಟಿ ರುಪಾಯಿಗಳು ಹಾಗೂ ಜುಲೈನಲ್ಲಿ 38,214 ಕೋಟಿ ರುಪಾಯಿಗಳಷ್ಟು ಇತ್ತು.
