ಉದಯವಾಹಿನಿ, ಭಾರತೀಯ ಸೇನೆಯು ತನ್ನ ಸಿಬ್ಬಂದಿಯ ಸಾಮಾಜಿಕ ಮಾಧ್ಯಮ ಬಳಕೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ತಂದಿದ್ದು, ಹೊಸ ನೀತಿಯನ್ನು ಬಿಡುಗಡೆ ಮಾಡಿದೆ. ಈ ಮೊದಲು ಹೇರಲಾಗಿದ್ದ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಸಡಿಲಿಸಿರುವ ಸೇನೆಯು, ಸೈನಿಕರು ಈಗ ಸಾಮಾಜಿಕ ಜಾಲತಾಣಗಳಲ್ಲಿನ ವಿಷಯಗಳನ್ನು ವೀಕ್ಷಿಸಲು ಅನುಮತಿ ನೀಡಿದೆ. ಆದರೆ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಕೆಲವು ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ.
ಸೈನಿಕರು ಫೇಸ್‌ಬುಕ್, ಎಕ್ಸ್ (ಟ್ವಿಟರ್), ಮತ್ತು ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ಗಳಲ್ಲಿನ ಪೋಸ್ಟ್‌ಗಳನ್ನು ಓದಬಹುದು ಅಥವಾ ವೀಕ್ಷಿಸಬಹುದು. ಆದರೆ ಯಾವುದೇ ಪೋಸ್ಟ್ಗಳಿಗೆ ಲೈಕ್ ಮಾಡುವುದು, ಕಾಮೆಂಟ್ ಮಾಡುವುದು ಅಥವಾ ಶೇರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಸೈನಿಕರು ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯಲು ಮತ್ತು ಸ್ವಯಂ ಜಾಗೃತಿ ಮೂಡಿಸಿಕೊಳ್ಳಲು ಈ ಅವಕಾಶ ನೀಡಲಾಗಿದೆ.
ಜಾಲತಾಣಗಳಲ್ಲಿ ದೇಶದ ವಿರುದ್ಧದ ನಕಲಿ ಸುದ್ದಿಗಳು ಅಥವಾ ದಾರಿತಪ್ಪಿಸುವ ಪೋಸ್ಟ್‌ಗಳು ಕಂಡುಬಂದಲ್ಲಿ, ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ವರದಿ ಮಾಡಲು ಸೂಚಿಸಲಾಗಿದೆ. 2020ರಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಮತ್ತು ಸೂಕ್ಷ್ಮ ಮಾಹಿತಿ ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸೇನೆಯು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಸೇರಿದಂತೆ ಸುಮಾರು 89 ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವಂತೆ ಆದೇಶಿಸಿತ್ತು. ವಿದೇಶಿ ಗುಪ್ತಚರ ಸಂಸ್ಥೆಗಳ ಜಾಲಕ್ಕೆ ಸೈನಿಕರು ಬೀಳದಂತೆ ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿತ್ತು. ಹೊಸ ನೀತಿಯು ಭದ್ರತೆ ಮತ್ತು ಆಧುನಿಕ ಯುಗದ ಅಗತ್ಯತೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.

Leave a Reply

Your email address will not be published. Required fields are marked *

error: Content is protected !!