ಉದಯವಾಹಿನಿ, ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ಟಿ20ಐ ಸರಣಿಗಳ ಭಾರತ ತಂಡದಲ್ಲಿ ಹರ್ಷಿತ್ ರಾಣಾಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಹೆಡ್ ಕೋಚ್ ಗೌತಮ್ ಗಂಭೀರ್ ಹಾಗೂ ಯುವ ವೇಗಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದ ವೇಳೆ ಗಂಭೀರ್ ಕೋಚ್ ಆಗಿದ್ದರು. ಇದರ ಆಧಾರದ ಮೇಲೆ ಉತ್ತಮ ಪ್ರದರ್ಶನ ತೋರದ ಹೊರತಾಗಿಯೂ ಹರ್ಷಿತ್‌ಗೆ ಭಾರತ ತಂಡದಲ್ಲಿ ಸತತವಾಗಿ ಅವಕಾಶ ನೀಡಲಾಗುತ್ತಿದೆ. ಗಂಭೀರ್ ಪಕ್ಷಪಾತ ಧೋರಣೆಯನ್ನು ಅನುಸರಿಸುತ್ತಿದ್ದಾರೆಂದು ಮಾಜಿ ಕ್ರಿಕೆಟಿಗ ಕೆ ಶ್ರೀಕಾಂತ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಆದರೆ, ಸ್ಪಿನ್ ದಿಗ್ಗಜ ಆರ್ ಅಶ್ವಿನ್ ಅವರು ಹರ್ಷಿತ್ ರಾಣಾಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆರ್ ಅಶ್ವಿನ್, ಕ್ರಿಕೆಟ್ ಪಂಡಿತರ ಟೀಕೆಗಳನ್ನು ಸ್ವೀಕರಿಸುವ ಮನೋಭಾವವನ್ನು ಆಟಗಾರರು ಬೆಳೆಸಿಕೊಳ್ಳಬೇಕಾಗುತ್ತದೆ. ಆದರೆ, ಮಾಜಿ ಕ್ರಿಕೆಟಿಗರು ಅಥವಾ ಅಭಿಮಾನಿಗಳ ಟೀಕೆಗಳು ಆರೋಗ್ಯಕರವಾಗಿರಬೇಕಷ್ಟೆ ಎಂದು ಹೇಳಿದ್ದಾರೆ. ಅಲ್ಲದೆ, ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಅವರು ಕೂಡ ನನ್ನನ್ನು ದೀರ್ಘಾವಧಿ ಟೀಕಿಸಿದ್ದಾರೆ. ಅವರ ಟೀಕೆಗಳು ಯಾವಾಗಲೂ ವ್ಯಾಪ್ತಿಯಲ್ಲಿ ಇರುತ್ತಿತ್ತು ಎಂದು ತಿಳಿಸಿದ್ದಾರೆ.
