ಉದಯವಾಹಿನಿ, ಇದೋರ್: ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಭಾರತ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದ ಮಧ್ಯ ಪ್ರದೇಶ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್, ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ದ್ವಿಶತಕ ಸಿಡಿಸುವ ಮೂಲಕ ಬಿಸಿಸಿಐ ಆಯ್ಕೆದಾರರಿಗೆ ಸಂದೇಶವನ್ನು ರವಾನಿಸಿದ್ದಾರೆ. ಪಂಜಾಬ್ ವಿರುದ್ಧದ ತನ್ನ ಪಂದ್ಯದಲ್ಲಿ ರಜತ್ ಪಾಟಿದಾರ್ ಸೊಗಸಾಗಿ ಬ್ಯಾಟ್ ಮಾಡಿ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನದಲ್ಲಿ ಚೊಚ್ಚಲ ದ್ವಿಶತಕವನ್ನು ಬಾರಿಸಿದ್ದಾರೆ. ಈ ಪಂದ್ಯದ ಎರಡನೇ ದಿನ ಶತಕವನ್ನು ಗಳಿಸಿದ್ದ ಇವರು, ಮೂರನೇ ದಿನ ದ್ವಿಶತಕವನ್ನು ಪೂರ್ಣಗೊಳಿಸಿದ್ದಾರೆ.
ಎಮೆರಾಲ್ಡ್ ಹೈಸ್ಕೂಲ್ ಗ್ರೌಂಡ್‌ನಲ್ಲಿ ಮೂರನೇ ದಿನವಾದ ಶುಕ್ರವಾರ 107 ರನ್‌ಗಳಿಂದ ಬ್ಯಾಟಿಂಗ್ ಆರಂಭಿಸಿದ ರಜತ್ ಪಾಟಿದಾರ್, ಪಂಜಾಬ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 328 ಎಸೆತಗಳಲ್ಲಿ 26 ಬೌಂಡರಿಗಳೊಂದಿಗೆ ತಮ್ಮ ಚೊಚ್ಚಲ ದ್ವಿಶತಕವನ್ನು ಪೂರ್ಣಗೊಳಿಸಿದರು. ಮೂರನೇ ದಿನದಾಟದ ಅಂತ್ಯಕ್ಕೆ ಪಾಟಿದಾರ್, 332 ಎಸೆತಗಳಲ್ಲಿ 205 ರನ್‌ಗಳನ್ನು ಗಳಿಸಿದ್ದು, ನಾಲ್ಕನೇ ಹಾಗೂ ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮಧ್ಯ ಪ್ರದೇಶ ತಂಡ 146 ಓವರ್‌ಗಳಿಗೆ 8 ವಿಕೆಟ್ ನಷ್ಟಕ್ಕೆ 519 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 232 ರನ್‌ಗಳಿಗೆ ಆಲ್‌ಔಟ್ ಆಗಿದ್ದ ಪಂಜಾಬ್ ಎದುರು 287 ರನ್‌ಗಳ ಬೃಹತ್ ಮುನ್ನಡೆಯನ್ನು ಪಡೆದಿದೆ.
