ಉದಯವಾಹಿನಿ, ಬೆಳಗಾವಿ: ಪ್ರೀತಿಸಿ ಮದುವೆಯಾಗಿ ವಿಚ್ಛೇದನ ಪಡೆದ ಬಳಿಕ ಮಾಜಿ ಪತ್ನಿಯನ್ನ ಪೊಲೀಸಪ್ಪ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪತ್ನಿಗೆ ಚಟ್ಟಕಟ್ಟಿ ಮನೆಯ ಹೊರಗಿನಿಂದ ಬೀಗ ಹಾಕಿಕೊಂಡು ಪೊಲೀಸಪ್ಪ ಕಾಣೆಯಾಗಿದ್ದ ಎನ್ನಲಾಗಿದೆ. ಮೃತದೇಹ ಕೊಳೆತು ವಾಸನೆ ಬಂದಾಗ ಸ್ಥಳೀಯರಿಂದ ಪ್ರಕರಣ ಬೆಳಕಿಗೆ ಬಂದಿದೆ. ಮನೆಗೆ ನುಗ್ಗಿ ಭೀಕರವಾಗಿ ಹತ್ಯೆಗೈದು ಬಳಿಕ ಡೋರ್ ಲಾಕ್ ಮಾಡಿಕೊಂಡು ಹಂತಕ ಪರಾರಿಯಾಗಿದ್ದ ಎನ್ನಲಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಈ ದಾರುಣ ಘಟನೆ ನಡೆದಿದೆ. ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಕಾಶಮ್ಮ ನೆಲ್ಲಿಗಣಿ (34) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಕಾಗವಾಡ ತಾಲೂಕಿನ ಬನಜವಾಡ ಗ್ರಾಮ ಸಂತೋಷ ಕಾಂಬಳೆ ಕೊಲೆ ಆರೋಪಿ ಎಂದು ತಿಳಿದು ಬಂದಿದೆ.
ಸವದತ್ತಿ ಕೆಎಸ್‌ಆರ್‌ಟಿಸಿ ಡಿಪೋ ವ್ಯಾಪ್ತಿಯಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡ್ತಿದ್ದ ಕಾಶಮ್ಮ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ಸಂತೋಷ ಪಾಟೀಲ್ ಇಬ್ಬರೂ ಸೇರಿ ಕಳೆದ 13 ವರ್ಷಗಳ ಹಿಂದೆಯೇ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದರೂ ಸಹ ಹಿರಿಯರ ಸಮ್ಮುಖದಲ್ಲಿ ಸಂಪ್ರದಾಯದಂತೆ ಮದುವೆ ಜೋಡಿ ಸಪ್ತಪದಿ ತುಳಿದಿತ್ತು. ಮದುವೆಯಾಗಿ ಕೆಲವೇ ದಿನಗಳಲ್ಲಿ ಕಾಶಮ್ಮಳಿಗೆ ಪತಿ ಸಂತೋಷ ನಿರಂತರ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದ್ದು ಗಂಡನ ಕಿರುಕುಳ ಹೆಚ್ಚಾದಂತೆ ಸವದತ್ತಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಕಾಶಮ್ಮ ವಾಸವಾಗಿದ್ದಳು ಎನ್ನಲಾಗಿದೆ.
