ಉದಯವಾಹಿನಿ, ಮೈಸೂರು: ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಈಗ ರಾಷ್ಟ್ರೀಯ ತನಿಖೆ ದಳ ಎಂಟ್ರಿಯಾಗಿದೆ. ಇಂದು ಮೈಸೂರಿಗೆ ಎನ್‌ಎಐ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಪೊಲೀಸರ ಜೊತೆ ತನಿಖೆಯ ಮಾಹಿತಿ ಪಡೆಯಲಿದ್ದಾರೆ. ಸಾಧಾರಣವಾಗಿ ಹೀಲಿಯಂ ಸ್ಫೋಟವಾಗುವುದಿಲ್ಲ. ಹೀಗಿದ್ದರೂ ಅರಮನೆಯ ಆವರಣದಲ್ಲೇ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಹಲವಾರು ಅನುಮಾನಗಳು ಈಗ ವ್ಯಕ್ತವಾಗಿದೆ. ಸ್ಫೋಟದ ತೀವ್ರತೆಗೆ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಬಲೂನ್ ಮಾರುತ್ತಿದ್ದ ಸಲೀಂ (40) ಮೃತಪಟ್ಟಿದ್ದು, ಮೃತದೇಹ ಛಿದ್ರ-ಛಿದ್ರವಾಗಿದೆ.
ಆರಂಭದಲ್ಲಿ ಮೃತ ಸಲೀಂ ಕೋಲ್ಕತ್ತಾದ ಮೂಲದವನು ಎನ್ನಲಾಗಿತ್ತು. ಆದರೆ ಈಗ ಉತ್ತರ ಪ್ರದೇಶ ಮೂಲದವನು ಎಂಬ ಮಾಹಿತಿ ಲಭ್ಯವಾಗಿದೆ. ಉತ್ತರ ಪ್ರದೇಶದಿಂದ ಸಹೋದರರ ಜೊತೆ ಮೈಸೂರಿಗೆ ಆಗಮಿಸಿದ ಈತ ಕಳೆದ 15 ದಿನಗಳಿಂದ ಲಷ್ಕರ್ ಮೊಹಲ್ಲಾದ ಷರೀಫ್ ಲಾಡ್ಜ್‌ನಲ್ಲಿ ವಾಸವಾಗಿದ್ದ.
ಮೈಸೂರು ಪ್ರಕರಣದಲ್ಲಿ ಹೀಲಿಯಂಗೆ ಬೇರೆ ಗ್ಯಾಸ್ ಮಿಶ್ರಣ ಮಾಡಿರುವ ಅನುಮಾನ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಮೂಲಗಳ ಪ್ರಕಾರ ಒಂದು ತಿಂಗಳ ಹಿಂದೆ ಸಲೀಂ ಮೈಸೂರಿಗೆ ಬಂದಿದ್ದಾನೆ. ಬಂದವನಿಗೆ ಅಷ್ಟು ಸುಲಭವಾಗಿ ಹೀಲಿಯಂ ಸಿಲಿಂಡರ್ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ.
